ಕೆ. ವಿ. ಶ್ರೀನಿವಾಸ ಪ್ರಭು
V ravichandran
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕಂಠದಾನ ಕಲಾವಿದ ಶ್ರೀನಿವಾಸ ಪ್ರಭು ಅವ್ರು ರಣಧೀರ ಪ್ರೇಮಲೋಕ ಅಂಜದ ಗಂಡು ಹೀಗೆ ರವಿಚಂದ್ರನ್ ಅವರ ಪ್ರಾರಂಭಿಕ ಚಿತ್ರ ಗಳಿಗೆ ಶ್ರೀನಿವಾಸ್ ಪ್ರಭು ಅವ್ರು ಕಂಠದಾನ ಮಾಡಿದ್ದಾರೆ
ಮತ್ತು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಅಷ್ಟೇ ಅಲ್ಲ ಧಾರಾವಾಹಿ ಅಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಡಿ ಡಿ ಚಂದನ ಉದಯ ಟಿವಿ ಈ ಟಿವಿ ಸೇರಿದಂತೆ ಅನೇಕ ಧಾರಾವಾಹಿ ಮೂಲಕ ಕರ್ನಾಟಕದ ಜನತೆ ಅನ್ನು ರಂಜಿಸಿದ್ದಾರೆ ಕಂಠದಾನ ಕಲಾವಿದ ಶ್ರೀನಿವಾಸ ಪ್ರಭು ಅವ್ರು
ಶ್ರೀನಿವಾಸ ಪ್ರಭು ಕನ್ನಡಿಗರ ಅಪ್ತ ಮಂದಹಾಸದ ಮುಖ. ಕನ್ನಡದ ಚಿನ್ನದ ಕಂಠದ ಇನಿಧ್ವನಿ. ಅವರು ಕಳೆದ ನಾಲ್ಕೂವರೆ ದಶಕಗಳಿಂದ ಸಾಂಸ್ಕೃತಿಕ ವೇದಿಕೆ, ರಂಗಭೂಮಿ, ಕಿರುತೆರೆ, ಸಿನಿಮಾ ಮುಂತಾದ ಪ್ರತಿಕ್ಷೇತ್ರದಲ್ಲೂ, ಹಲವು ರೀತಿಗಳಲ್ಲಿ, ಕನ್ನಡಿಗರಿಗೆ ನಿರಂತರ ಗೋಚರಿಸುತ್ತ ಬಂದಿರುವ ವಿಶಿಷ್ಟ ಪ್ರತಿಭೆ.
ಕೆ. ವಿ. ಶ್ರೀನಿವಾಸಪ್ರಭು ಅವರು ಹಾಸನ ಜಿಲ್ಲೆಯ ಕಟ್ಟೇಪುರದಲ್ಲಿ 1955ರ ಅಕ್ಟೋಬರ್ 21ರಂದು ಜನಿಸಿದರು. ತಂದೆ ಕೆ.ಆರ್.ವಿ. ಸುಬ್ರಹ್ಮಣ್ಯ. ತಾಯಿ ರುಕ್ಮಿಣಮ್ಮ. ಕನ್ನಡ ಬಿ. ಎ. ಆನರ್ಸ್ ಪ್ರಥಮ ರ್‍ಯಾಂಕ್ ಮತ್ತು 1974ರಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಗಳಿಸಿದ ಸಾಧನೆ ಪ್ರಭು ಅವರದ್ದು. ಇದಲ್ಲದೆ ಪ್ರಭು 1980ರಲ್ಲಿ ದೆಹಲಿಯ ನಾಟಕ ಶಾಲೆಯಿಂದ ನಾಟಕ ರಂಗದಲ್ಲಿ ಪದವಿ ಗಳಿಸಿದರು.
ಶ್ರೀನಿವಾಸ ಪ್ರಭು 1983ರಿಂದ 1998ರವರೆಗೆ ಬೆಂಗಳೂರು ಮತ್ತು ಗುಲ್ಬರ್ಗಾ ದೂರದರ್ಶನ ಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕರ್ತವ್ಯ ನಿರ್ವಹಣೆ ಮಾಡಿದರು.
ಶ್ರೀನಿವಾಸ ಪ್ರಭು ಅವರು ರಂಗಭೂಮಿಯಲ್ಲಿ ಹಲವು ನಿಟ್ಟಿನಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಅವರು ನಟಿಸಿದ್ದಾರೆ, ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ ಮತ್ತು ನಾಟಕಗಳನ್ನು ರಚಿಸಿದ್ದಾರೆ.
ಶ್ರೀನಿವಾಸ ಪ್ರಭು ಬಿಜಾಪುರ, ಕುಂಬಳಗೋಡು, ಕಾಸರಗೋಡು, ಉಡುಪಿ, ಹೊನ್ನಾವರ, ಗೌರಿಬಿದನೂರು ಹೀಗೆ ನಾಡಿನಾದ್ಯಂತ ಸಂಚರಿಸಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಸ್ಥಳೀಯ ತಂಡಗಳಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿರುವ ನಾಟಕಗಳ ಕೊರತೆ ನೀಗಿಸಲು ಅನೇಕ ಕತೆ-ಕಾದಂಬರಿಗಳನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ.
ಬೆಳ್ಳಿಗುಂಡು, ಸಿಕ್ಕು, ತಲೆಗೊಂದು ಕೋಗಿಲೆ, ನೆರಳಿಲ್ಲದ ಜೀವಗಳು, ಅಂತಿಮ ಯಾತ್ರೆ, ಉದ್ಭವ, ಗುಳ್ಳೆನರಿ, ರಾಜಬೇಟೆ, ಪರಮೇಶಿ ಪ್ರೇಮ ಪ್ರಸಂಗ, ಅಪಕಾರಿಯ ಕಥೆ, ಸಾಮಿಯ ಸ್ವಗತ ಮೊದಲಾದವು ಪ್ರಭು ರಚಿಸಿ ನಿರ್ದೇಶಿಸಿದ ನಾಟಕಗಳು. ಬೆಕೆಟ್, ಅಂತಿಗೊನೆ, ನಾನೇ ಬಿಜ್ಜಳ ಮೊದಲಾದವು ಅವರು ನಿರ್ದೇಶಿಸಿದ ನಾಟಕಗಳು.
ಹ್ಯಾಮ್ಲೆಟ್, ಈ ಮುಖದವರು, ಬೆಕೆಟ್, ಫಾಸ್ಟಸ್, ನೀ ನಾನದ್ರೆ ನಾ ನೀನೇನಾ, ಇತಿ ನಿನ್ನ ಅಮೃತಾ, ರಾಜಬೇಟೆ, ಸಾಮಿಯ ಸ್ವಗತ, ಮಹಾಸ್ವಾಮಿ, ಮಾರೀಚನ ಬಂಧುಗಳು ಮೊದಲಾದವು ಪ್ರಭು ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ನಾಟಕಗಳು.
ಪ್ರಭು ನಟಿಸಿದ ‘ಹ್ಯಾಮ್ಲೆಟ್’ ಎಷ್ಟು ಜನಪ್ರಿಯವಾಗಿತ್ತೆಂದರೆ ಜನ ಅವರನ್ನು ‘ಹ್ಯಾಮ್ಲೆಟ್ ಪ್ರಭು’ ಎಂದೇ ಗುರುತಿಸುತ್ತಿದ್ದರು. ಪ್ರಭು ಅವರು ರಂಗರೂಪಕ್ಕೆ ಅಳವಡಿಸಿ ನಿರ್ದೇಶಿಸಿದ “ಸಿಕ್ಕು” ನಾಟಕ ಮ್ಯಾಂಚೆಸ್ಟರ್ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿತು.
ಶ್ರೀನಿವಾಸ ಪ್ರಭು ದೂರದರ್ಶನದಲ್ಲಿದ್ದ 14 ವರ್ಷಗಳ ಅವಧಿಯಲ್ಲಿ ನೂರಾರು ನಾಟಕಗಳನ್ನು ಕಿರುತೆರೆಗೆ ಅಳವಡಿಸಿದರು. ಬಿ. ಜಯಶ್ರೀ, ಸಿ.ಜಿ. ಕೃಷ್ಣಸ್ವಾಮಿ, ಸುರೇಂದ್ರನಾಥ್, ನೀನಾಸಂ ತಂಡ, ಬಿ. ಸಿ ಸೇರಿದಂತೆ ಅನೇಕ ಖ್ಯಾತರಿಂದ ನಾಟಕ ವ್ಯವಸ್ಥೆಗೊಳಿಸಿ ದೂರದರ್ಶನಕ್ಕೆ ಚಿತ್ರೀಕರಣ ಕಲ್ಪಿಸಿದರು. ತೆನಾಲಿರಾಮ, ಡಿಟೆಕ್ಟಿವ್ ಅಜಿತ್ ಮೊದಲಾದ ದೂರದರ್ಶನದ ಇನ್ ಹೌಸ್ ಧಾರಾವಾಹಿಗಳ ನಿರ್ಮಾಣ ನಿರ್ದೇಶನ ಮಾಡಿದರು.
ವಿ ರವಿಚದ್ರನ್
ಶ್ರೀನಿವಾಸ ಪ್ರಭು ಅವರು ದೂರದರ್ಶನದ ಸೇವೆಯಿಂದ ಹೊರಬಂದ ಮೇಲೆ ವೃತ್ತಿಪರ ನಟ ನಿರ್ದೇಶಕರಾಗಿ ತೊಡಗಿಕೊಂಡರು. ಜನನಿ, ಮನ್ವಂತರ, ಮುಕ್ತ ಮುಕ್ತ, ಶರಪಂಜರ, ಮಹಾಪರ್ವ, ಕ್ಲಾಸ್‍ಮೇಟ್ಸ್, ಗೀತಾಂಜಲಿ, ಮನೆಯೊಂದು ಮೂರು ಬಾಗಿಲು, ಜೋಡಿಹಕ್ಕಿ, ಕುಟುಂಬ, ನಾಕುತಂತಿ, ಮದರಂಗಿ, ತಕಧಿಮಿತಾ ಮುಂತಾದ ಧಾರವಾಹಿಗಳಲ್ಲಿ ಮುಖ್ಯಪಾತ್ರ ನಿರ್ವಹಿಸಿದರು. ಸಂಜೆ ಮಲ್ಲಿಗೆ, ಡಿಟೆಕ್ಟಿವ್ ಧನುಷ್, ಅಂತರಗಂಗೆ, ಆಸರೆ ಮುಂತಾದ ಮೆಗಾ ಧಾರಾವಾಹಿಗಳನ್ನು ವಿವಿಧ ವಾಹಿನಿಗಳಿಗೆ ನಿರ್ದೇಶಿಸಿದರು.
ಶ್ರೀನಿವಾಸ ಪ್ರಭು ಅವರಲ್ಲಿ ಎದ್ದು ಕಾಣುವ ಮತ್ತೊಂದು ವಿಶಿಷ್ಟ ಪ್ರತಿಭೆ ಅವರ ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ. ಸಿ. ಅಶ್ವಥ್ ಅವರ ‘ಕನ್ನಡವೇ ಸತ್ಯ’, ಈTV ವರ್ಷದ ಕನ್ನಡಿಗ, ಉಡುಪಿ ಪರ್ಯಾಯ ಮಹೋತ್ಸವಗಳು, ಧರ್ಮಸ್ಥಳ ಲಕ್ಷದೀಪೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಪ್ರಭು ಅವರು ನಿರೂಪಿಸುವ ಭಾಷಾ ಶೈಲಿ ಸಂತೋಷ ನೀಡುವಂತದ್ದು. ಕಾರ್ಯಕ್ರಮಗಳ ಮುನ್ನೋಟವನ್ನು ಕಿರುತೆರೆಗಳಲ್ಲಿ ಅವರ ಧ್ವನಿಯಲ್ಲಿ ಕೇಳುವುದೂ ಅಷ್ಟೇ ಸೊಬಗಿನದ್ದು.
ಶ್ರೀನಿವಾಸ ಪ್ರಭು ಚಲನಚಿತ್ರ ಕ್ಷೇತ್ರದಲ್ಲೂ ಸಕ್ರಿಯರು. 1976-77ರಲ್ಲಿ ಮೂಡಿಬಂದ ಟಿ. ಎಸ್. ರಂಗಾ ನಿರ್ದೇಶನದ ‘ಗೀಜಗನ ಗೂಡು’ ಅವರ ಅಭಿನಯದ ಮೊದಲ ಚಿತ್ರ. ಆದಿ ಶಂಕರಾಚಾರ್ಯ, ಆಕ್ಸಿಡೆಂಟ್, ಚೈತ್ರದ ಚಿಗುರು, ಮುಸ್ಸಂಜೆ, ಕಾನೂರು ಹೆಗ್ಗಡತಿ, ಕನಕಪುರಂದರ, ರಾಷ್ಟ್ರಗೀತೆ, ಹುಡುಗರು, ಮೇಲುಕೋಟೆ ಮಂಜ, ಸ್ಮೈಲ್ ಪ್ಲೀಸ್ ಮುಂತಾದ ಚಿತ್ರಗಳು ಸೇರಿದಂತೆ ಅವರು ನೂರಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರನಿರ್ವಹಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರ ಚಿತ್ರಜೀವನ ಪ್ರಾರಂಭದ ಸುಮಾರು 20 ಪ್ರಮುಖ ಚಿತ್ರಗಳಲ್ಲಿ ಕಂಠದಾನ ಮಾಡಿದ್ದಾರೆ. ಪ್ರಭು ಅವರು “ಬಿಂಬ – ಆ ತೊಂಬತ್ತು ನಿಮಿಷಗಳು” ಚಿತ್ರವನ್ನು ಜಿ. ಮೂರ್ತಿ ಅವರೊಡನೆ ನಿರ್ಮಿಸಿ ನಿರ್ದೇಶಿಸಿ, ಸ್ವಯಂ ನಟಿಸಿರುವ ಚಿತ್ರ. ಇದು ಒಬ್ಬನೇ ನಟ ಆಭಿನಯಿಸಿರುವ, ಒಂದೇ ಶಾಟ್ನಲ್ಲಿ ಚಿತ್ರಿಸಿರುವ ಪ್ರಪ್ರಥಮ ಚಿತ್ರ ಎಂದು ವಿಶ್ವದಾಖಲೆ ನಿರ್ಮಿಸಿದ್ದು, ಇದು ಮಹಾನ್ ನಾಟಕಕಾರ ‘ಸಂಸ’ರ ಜೀವನದ ಕಥಾಹಂದರವನ್ನು ಒಳಗೊಂಡಿದೆ. ಪ್ರಭು ಅನೇಕ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳಿಗೂ ನಿರೂಪಣೆ ಮಾಡಿದ್ದಾರೆ.
ಪ್ರಭು ಅಡುಗೆಕಲೆಯ ಪ್ರವೀಣರೂ ಹೌದು. ಅವರ ‘ಸಿರಿಪಾಕ’ ಎಂಬ ಪುಸ್ತಕವೂ ಹೊರಬಂದಿದೆ.
ಶ್ರೀನಿವಾಸ ಪ್ರಭು ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಗೌರವ ಸಂದಿದೆ.
ಶ್ರೀನಿವಾಸ ಪ್ರಭು ಅವರ ಕುಟುಂಬ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಪಾಶ್ಚಾತ್ಯ-ಭಾರತೀಯ ಕಲಾಪ್ರಕಾರಗಳ ಮಧುರ ಸಂಗಮ. ಪ್ರಭು ಅವರ ಪತ್ನಿ ರಂಜಿನಿ ಪ್ರಭು ಕಾಲೇಜು ಶಿಕ್ಷಕಿ, ಕವಯತ್ರಿ ಮತ್ತು ರಂಗಾಸಕ್ತೆ. ಪ್ರಭು ಮತ್ತು ರಂಜಿನಿ ದಂಪತಿಗಳಿಬ್ಬರೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಇಬ್ಬರೂ ಶಾಮಲಾಭಾವೆಯವರ ಬಳಿ ಸಂಗೀತ ಕಲಿತಿದ್ದಾರೆ. ಮಗಳು ಅನ್ವಿ ಲಂಡನ್ನಿನ ಚೆಲ್ಸಿ ಕಾಲೇಜಿನಲ್ಲಿ ಲಲಿತಕಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭರತನಾಟ್ಯದಲ್ಲೂ ಪ್ರಾವೀಣ್ಯತೆ ಸಾಧಿಸಿರುವ ಅನ್ವಿ ಇಂಗ್ಲಿಷಿನಲ್ಲಿ ಕವಿತೆ ಬರೆಯುತ್ತಾರೆ. ಮಗ ಅನಿರುದ್ಧ ಪಾಶ್ಚಾತ್ಯ ಸಂಗೀತದಲ್ಲಿ ಆಸಕ್ತರಾಗಿದ್ದು, ತಾವೇ ಹಾಡು ಬರೆದು ಸಂಯೋಜಿಸಿ ಹಾಡುತ್ತಾರೆ ಮತ್ತು ಗಿಟಾರ್ ವಾದನ ಪ್ರವೀಣರೂ ಆಗಿದ್ದಾರೆ.
‘ಏನ ಹೇಳಲಿ ಪ್ರಭುವೇ?’ ಎಂಬ ಪ್ರಸಿದ್ಧ ಅಂಕಣದ ಮೂಲಕ ಪ್ರಭು ತಮ್ಮಬದುಕಿನ ವಿಶಿಷ್ಟ ಪಯಣವನ್ನು ತೆರೆದಿಟ್ಟಿದ್ದಾರೆ.
ಪ್ರತಿಭಾವಂತರೂ ಆತ್ಮೀಯರೂ ಆದ ಶ್ರೀನಿವಾಸ ಪ್ರಭು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಮತ್ತು ಅವರ ಕುಟುಂಬದವರಿಗೆ ಹಾರ್ದಿಕ ಶುಭಹಾರೈಕೆಗಳು.
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
Related Stories
December 19, 2024
December 19, 2024
December 19, 2024