Rajanikanth kannada movie
ರಜನಿಕಾಂತ್ ಚಿತ್ರಜಗತ್ತು ಕಂಡ ಬಹುದೊಡ್ದ ಸೂಪರ್ ಸ್ಟಾರ್. ಕೆ. ಬಾಲಚಂದರ್ ಅವರ ಅಪೂರ್ವರಾಗಂಗಲ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕನ್ನಡಿಗ ತಮಿಳು ಚಿತ್ರರಂಗದಲ್ಲಿ ಬೆಳೆದ ಪರಿಯೇ ಅದ್ಭುತ.
ರಜನಿಕಾಂತ್ ತಮಿಳು ಚಿತ್ರಗಳ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಜೊತೆಗೆ ಬಾಂಗ್ಲಾ ಮತ್ತು ಇಂಗ್ಲೀಷ್ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅವರು ಅಭಿನಯದ ಕನ್ನಡ ಚಿತ್ರಗಳುಃ
ಕಥಾಸಂಗಮಃ 1976 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪುಟ್ಟಣ್ನ ಕಣಗಾಲ್ ನಿರ್ದೇಶಿಸಿದ್ದರು. ಮೂರು ಕಥೆಗಳ ಸಂಕಲನ ಇದಾಗಿತ್ತು. ಅದರಲ್ಲಿನ ಮುನಿತಾಯಿ ಕತೆಯಲ್ಲಿ ರಜನಿಕಾಂತ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.
ಬಾಳು ಜೇನುಃ 1976 ರ ಈ ಚಿತ್ರದಲ್ಲಿ ಆರತಿ ಗಂಗಾಧರ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ಇದು ತಮಿಳು ಚಿತ್ರದ ರೀಮೇಕ್ ಆಗಿತ್ತು. ಇದರಲ್ಲಿ ರಜನಿಕಾಂತ್ ವಾಸು ಎನ್ನುವ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು.
ಒಂದು ಪ್ರೇಮದ ಕಥೆಃ 1977 ರ ಈ ಚಿತ್ರವನ್ನು Joe Simon ನಿರ್ದೇಶಿಸಿದ್ದರು. ಶಾರದರಾವ್, ಮಾನು ಅಶೋಕ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅಧ್ಯಕ್ಷನ ಪಾತ್ರದಲ್ಲಿ ರಜನಿಕಾಂತ್ ಅಭಿನಯಿಸಿದ್ದರು.
ಸಹೋದರರ ಸವಾಲ್ಃ ಕೆ.ಎಸ್. ಆರ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ರಜನಿಕಾಂತ್ ಅಭಿನಯಿಸಿದ್ದರು. ಇಲ್ಲಿಯವರೆಗೆ ಅಭಿನಯಿಸಿದ ಪಾತ್ರಗಳಿಗಿಂತ ಈ ಸಿನಿಮಾದಲ್ಲಿನ ಪಾತ್ರ ಪಕ್ಕಾ ಕಮರ್ಷಿಯಲ್ ಆಗಿತ್ತು . ಈ ಚಿತ್ರ 1977 ರಲ್ಲಿ ಬಿಡುಗಡೆಯಾಗಿತ್ತು.
ಕುಂಕುಮ ರಕ್ಷೆಃ 1977 ರಲ್ಲಿ ಬಿಡುಗಡೆಯಾದ ಕುಂಕುಮ ರಕ್ಷೆ ಚಿತ್ರವನ್ನು ಎಸ್. ಕೆ.ಎ.ಚಾರಿ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅಶೋಕ್, ಮಂಜುಳಾ ಕೂಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.
ಗಲಾಟೆ ಸಂಸಾರಃ 1977 ರಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶಕರು ಸಿ.ವಿ.ರಾಜೇಂದ್ರನ್. ತಮಿಳಿನ ರೀಮೇಕ್ ಸಿನಿಮಾದ ಗಲಾಟೆ ಸಂಸಾರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಮಂಜುಳಾ ಅಭಿನಯಿಸಿದ್ದರು.
ಕಿಲಾಡಿ ಕಿಟ್ಟುಃ ಕೆ.ಎಸ್ಽಅರ್ ದಾಸ್ ನಿರ್ದೇಶನದ 1978 ರ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರಜನಿಕಾಂತ್ ವಜ್ರಮುನಿ ಮುಂತಾದವರಿದ್ದರು. ಈ ಚಿತ್ರದಲ್ಲಿ ರಜನಿಕಾಂತ್ ಪೋಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದರು.
ಮಾತು ತಪ್ಪದ ಮಗಃ 1978 ರಲ್ಲಿ ಬಿಡುಗಡೆಯಾದ ಮಾತು ತಪ್ಪದ ಮಗ ಚಿತ್ರದ ನಿರ್ದೇಶಕರು ಪೇಕೇಟಿ ಶಿವರಾಂ. ರಜನಿಕಾಂತ್ ಜೊತೆಗೆ ಅನಂತ್ ನಾಗ್, ಆರತಿ ಮುಂತಾದವರಿದ್ದರು.
ತಪ್ಪಿದ ತಾಳಃ ಕೆ. ಬಾಲಚಂದರ್ ನಿರ್ದೇಶನದ ಈ ಚಿತ್ರ ತಮಿಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ತಯಾರಾದ ಚಿತ್ರ. ರಜನಿಕಾಂತ್ ಜೊತೆಗೆ ಸರಿತಾ, ಪ್ರಮಿಳಾ ಜೋಶಾಯ್ ಜೊತೆಗೆ ಕಮಲ್ ಹಾಸನ್ ಕೂಡ ಚಿಕ್ಕಪಾತ್ರದಲ್ಲಿ ಬಂದುಹೋಗಿದ್ದರು.
ಪ್ರಿಯಾಃ ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿಯೂ ಏಕಕಾಲಕ್ಕೆ ತಯಾರಾದ ಈ ಚಿತ್ರದ ನಿರ್ದೇಶಕರು ಎಸ್. ಪಿ. ಮುತ್ತುರಾಮನ್. ಈ ಚಿತ್ರದಲ್ಲಿ ರಜನಿಕಾಂತ್, ರೆಬೆಲ್ ಸ್ಟಾರ್ ಅಂಬರೀಶ್ ಜೊತೆಗೆ ಶ್ರೀದೇವಿ ಅಭಿನಯಿಸಿದ್ದರು. 1978 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
ಘರ್ಜನೆಃ 1981 ರಲ್ಲಿ ತಯಾರಾದ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಿತ್ತು. ಸಿ.ವಿ.ರಾಜೇಂದ್ರನ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಗೀತಾ ಮತ್ತು ಮಾಧವಿ ನಾಯಕಿಯರಾಗಿ ಅಭಿನಯಿಸಿದ್ದರು.
ಬ್ಲಡ್ ಸ್ಟೋನ್ಃ ರಜನಿಕಾಂತ್ ಅಭಿನಯಿಸಿದ ಇಂಗ್ಲೀಷ್ ಭಾಷೆಯ ಚಲನಚಿತ್ರವಿದು. ಹಾಲಿವುಡ್ ನ ನಿರ್ದೇಶಕರಾದ ವೈಟ್ ಹೆಚ್ ಲಿಟಲ್ ಈ ಚಿತ್ರದ ನಿರ್ದೇಶಕರು.
ರಜನಿಕಾಂತ್ ಸ್ಟಾರ್ ಆದ ನಂತರ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ಆದರೇ ಅವರ ಚಿತ್ರಗಳು ಕರ್ನಾಟಕದಲ್ಲಿ ಅದ್ಭುತ ಯಶಸ್ಸು ಕಂಡಿವೆ, ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ರಜನಿಕಾಂತ್ ನಿಜಕ್ಕೂ ದಂತಕಥೆ.
ಅವರಿಗೆ ಜನ್ಮದಿನದ ಶುಭಾಶಯಗಳು
ಇದು ಓಮನ್ ನಂಬರ್. ಅಲ್ಲಿನ ಹೆಣ್ಮಗಳು ತೀರಾ ನನ್ನ ಮೇಲಿನ ಖಾಳಜಿಯಿಂದ
“ಇದು ಎಮರ್ಜೆನ್ಸಿ custom ಕರೆ. ನಿಮಗೆ ತೊಂದರೆಯಿದೆ. ಹಾಗಾಗಿ 9 ಒತ್ತಿ. ..“
ಎಂದಳು. ನಮ್ಮವರೇ ನಮಗಾಗದ ಕಲಿಗಾಲದಲ್ಲಿ ದೂರದಲ್ಲಿ ಕುಳಿತವರು ನಮ್ಮ ಬಗ್ಗೆ ಇಷ್ಟು ಅಕ್ಕರೆ ತೋರಿಸಿದರೆ ಹೇಗಾಗಬೇಡ.? ಅದರಲ್ಲೂ ಸರ್ಕಾರಿ ಕೆಲಸಗಳ ಹಿಂದೆ ಬಿದ್ದರೂ ಅಲೆಸಿ ಅಲೆಸಿ ಸುತ್ತಾಡಿಸಿ ಸುಸ್ತು ಮಾಡುವಾಗ ಅವರೇ ಮುಂದೆ ನಿಂತು ನನ್ನ ಸಮಸ್ಯೆಗೆ ಪರಿಹಾರ ಕಂಡುಹಿಡಿದು ನನ್ನನ್ನು ರಕ್ಷಣೆ ಮಾಡುತ್ತಿರುವಾಗ ನಾನು ಕೃತಜ್ಞತೆ ಸಲ್ಲಿಸಲೇ ಬೇಕಲ್ಲವೇ. ?
ಅದಕ್ಕಾಗಿ ಒಂಭತ್ತೇನು ? ತೊಂಭತ್ತಾದರೂ ಒತ್ತುವುದಕ್ಕೆ ಸಿದ್ಧ ಎಂದವನೇ ಒತ್ತಿದೆ.
ಅಲ್ಲಿಂದ ಶುರುವಾದ ಮಜವಾದ ಪಯಣ… ಆತ ತಬ್ಬಿಬ್ಬಾಗಿ ಕರೆ ಕಟ್ ಮಾಡುವವರೆಗೂ ಹೋಯಿತು.
ನಿಮ್ಮ ಆಧಾರ್ ನಂಬರ್ ಎಂದ. ಕೊನೆಯ ನಾಲ್ಕು ಅಂಕೆ ತಪ್ಪು ಹೇಳಿದೆ.
ನಿಮ್ಮ ಮೇಲೆ ಡ್ರ ಮತ್ತು ಮನೀ ಲಾಂಡೇರಿಂಗ್ ಆರೋಪ ಇದೇ ಎಂದ
ಹೌದು ಮೊದಲು ಮಾಡುತ್ತಿದ್ದೆ..ಈಗಲೂ ಆಗಾಗ ಮಾಡುತ್ತಿದ್ದೇನೆ
ಎಂದೆ.
ಡಿಜಿಟಲ್ ಅರೆಸ್ಟ್, ಅಲುಗಾಡದೆ ಕುಳಿತುಕೊಳ್ಳಿ ಅಂದ. ಎದ್ದು ಕುಣಿದಾಡಿದೆ.
ಎಷ್ಟು ಹಣ ಇದೇ ಎಂದದ್ದಕ್ಕೆ ,
ಸಾವಿರಾರು ಕೋಟಿ ಇದೆ. ..
ಎಂದೆ.
ಮುಂಬೈಗೆ ಬಂದು statement ಕೊಡಿ.
ಎಂದವನಿಗೆ
ಬೇಕಿದ್ದರೆ ಇಲ್ಲೇ ಬಂದು ತೆಗೆದುಕೊಳ್ಳಿ ಎಂದೆ. ಆನಂತರ ಕರೆ ಕಟ್ ಮಾಡುವವರೆಗೆ ಆಡಿದ್ದೇ ಆಟ.
ಈ ಹಿಂದೆ ನನ್ನ ಆತ್ಮೀಯ ಸ್ನೇಹಿತರಿಗೂ ಇದೇ ಆಗಿತ್ತು. ಅದರ ವಿಡಿಯೋ ಇಷ್ಟರಲ್ಲೇ ನಿಮ್ಮ ಮುಂದಿಡುವೆ.
ಉಳ್ಳವರು ಹಣ ಕಳೆದುಕೊಳ್ಳುವರು, ಇಲ್ಲದವರು ಇಷ್ಟು ಮಾಡುವರಯ್ಯ 😂😂😂😂
ಸೂಕ್ಷ್ಮ ದರ್ಶಿನಿ.
ಅವಧಿ : 2 ಘಂಟೆ 22 ನಿಮಿಷಗಳು
ತಾರಾಗಣ : ನಜ್ರಿಯ ನಾಝಿಮ್,. ಬಸಿಲ್ ಜೋಸೆಫ್
ನಿರ್ದೇಶಕರು : ಎಂ ಸಿ ಜಿತನ್
ಅಮ್ಮಚ್ಚಿಯ ನೆನೆಪಿನ ಕತೆಯ ನಡುವಣ ಥ್ರಿಲ್ಲರ್ ಕತೆ ಈ ಸಿನಿಮಾದ್ದು. ಸಾಮಾನ್ಯ ಗೃಹಿಣಿ ಪ್ರಿಯ ಪತ್ತೇಧಾರಿ ಮನೋಭಾವದವಳು. ಪಕ್ಕದ ಮನೆಗೆ ಹೊಸದಾಗಿ ಬರುವ ಅಮ್ಮ ಅಮ್ಮಚ್ಚಿ ಮತ್ತು ಮಗ ಮ್ಯಾನಯಲ್ ಎಲ್ಲರಿಗೂ ಪರಿಚಿತವಾಗುತ್ತಾರೆ. ಆದರೆ ಅಮ್ಮಚ್ಚಿಗೆ ಅರಳು ಮರಳು ಅರ್ಥಾತ್ ಅಲ್ಜಮರ್ ಖಾಯಿಲೆ. ಆದರೆ ಮ್ಯಾನ್ಯುಯಲ್ ನ ವಿಚಿತ್ರ ನಡವಳಿಕೆ ಸಂಶಯಾಸ್ಪದವಾಗಿ ಕಾಣಿಸುತ್ತದೆ. ಹಾಗೆಯೇ ಅಮ್ಮಚ್ಚಿಗೆ ನಿಜಕ್ಕೂ ಮರೆವಿನ ಖಾಯಿಲೆ ಇಲ್ಲ ಎಂಬುದನ್ನು ತಾರ್ಕಿಕ ಅಂಶಗಳ ಮೇಲೆ ಪತ್ತೆ ಮಾಡುತ್ತಾಳೆ. ಅಂದರೆ ಮಾನ್ಯುಯಲ್ ಏನೋ ಪಿತೂರಿ ಮಾಡುತ್ತಿದ್ದಾನೆ,. ಅಮ್ಮನನು ಹೆದರಿಸಿ ಕಟ್ಟಿಹಾಕಿದ್ದಾನೆ ಎನ್ನುವುದು ಅವಳಿಗೂ ಪ್ರೇಕ್ಷಕರಿಗೂ ಗೊತ್ತಾಗುತ್ತದೆ.
ಆ ರಹಸ್ಯ ಏನಿರಬಹುದು ?
ಎಂದು ಪತ್ತೆ ಮಾಡಲು ಹೊರಡುವ ಪ್ರಿಯಾಗೆ ಅನೂಹ್ಯ ಸಂಗತಿಗಳು ತೆರೆದುಕೊಳ್ಳುತ್ತವೆ.
ಇದೊಂದು ಸರಳ ಕತೆಯ ಸರಳ ನಿರೂಪಣೆಯ ಚಿತ್ರ. ಯಾವುದೇ ಧಾವಂತವಿಲ್ಲದೇ ಸಾಗುವ ಸಿನಿಮಾ ಇದು. ಮಲಯಾಳಂ ಚಿತ್ರಕರ್ಮಿಗಳು ಕಥೆಗೆ ನಿಷ್ಠವಾಗಿ ಚಿತ್ರಕತೆ ಬರೆದು ನಿರೂಪಿಸುತ್ತಾರೆ. ಅವರಿಗೆ ಓಪನಿಂಗ್ ಸೀನ್ , ಸ್ಟೈಲಿಶ್ ಟೇಕ್ಸ್ ಇತ್ಯಾದಿಗಳು ಬೇಕಿಲ್ಲ. ಹಾಗೆಯೇ ಅಲ್ಲಿನ ನೋಡುಗರೂ ಕೂಡ ಕತೆ ಸೆಟಪ್ ಆಗುವವರೆಗೆ ತಾಳ್ಮೆಯಿಂದ ಕಾಯುತ್ತಾರೆ.
ಸೂಕ್ಷ್ಮದರ್ಶಿನಿಯೂ ಅಷ್ಟೇ! ಸೆಟಪ್ ಆಗುವವರೆಗೆ ತಾಳ್ಮೆ ಬೇಕು. ಕೆಲವೊಂದನ್ನು ಊಹೆ ಮಾಡಬಹುದು. ಹಾಗೆಯೇ ಇಂಥ ಕತೆಗಳನ್ನು ಈ ಮೊದಲು ಸುಮಾರಷ್ಟು ನೋಡಿದ್ದೇವಲ್ಲ ಎನಿಸುವುದು ಸತ್ಯ . ದ್ವಿತೀಯಾರ್ಧದಲ್ಲಿ ಸಿನಿಮಾ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ . ಒಂದು ಕೊಲೆಯ ಪತ್ತೇದಾರಿಕೆ ಕತೆಯನ್ನು ಧಾವಂತವಿಲ್ಲದೇ ನಿರೂಪಿಸುವ ಅವರ ಧೈರ್ಯಕ್ಕೆ ಕಾರಣ ಅಲ್ಲಿನ ನೋಡುಗರು ಎಂಬುದರಲ್ಲಿ ಎರಡು ಮಾತಿಲ್ಲ.
ನಜ್ರಿಯ ನೋಡಲು ಚಂದ. Acting ಸೂಪರ್. ಬಸಿಲ್ ಜೋಸೆಫ್ ಅವರ ಪಾತ್ರ ಚೆನ್ನಾಗಿದೆ. ಹಿನ್ನಲೆ ಸಂಗೀತ, ಕ್ಯಾಮೆರಾ ವರ್ಕ್ ಸೂಪರ್.
ನನಗೆ ಕಾಡುವ ಎರಡು ಚಿತ್ರಗಳೆಂದರೇ ಸಂಗ್ಯಾ ಬಾಳ್ಯಾ ಮತ್ತು ಭುಜಂಗಯ್ಯನ ದಶಾವತಾರ. ಸಂಗ್ಯಾ ಬಾಳ್ಯ ನಾನು ಮೊದಲಿಗೆ ನೋಡಿದ್ದು ದೂರದರ್ಶನದಲ್ಲಿ . ಆವಾಗ ಕಿರುಪರದೆಯ ಮೇಲೆ ಏನೇ ಬಂದರೂ ನೋಡುವುದೇ ಸಂಭ್ರಮವಿದ್ದ ಕಾಲ. ಅಂತಹ ಸಂದರ್ಭದಲ್ಲಿ ಸಂಗ್ಯಾಬಾಳ್ಯಾ ಸಿನಿಮಾ ಬಂದಿತ್ತು. ಆದರೇ ನಾನು ನನ್ನ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕ ಬರೆಯುವ ಸಂದರ್ಭದಲ್ಲಿ ಸಿನಿಮಾಗಳನ್ನು ನೋಡುತ್ತಿದ್ದಾಗ ಮತ್ತೊಮ್ಮೆ ಅಧ್ಯಯನಕ್ಕಾಗಿ ನೋಡಿದ್ದೆ. ಆದರೇ ನೋಡುತಾ ನೋಡುತಾ ಆ ಕತೆಗಿಂತ ಆ ಸೊಗಡಿಗೆ ಮಾರುಹೋಗಿದ್ದೆ. ಹಾಗೇ ನೋಡಿದರೇ ತೀರಾ ಸರಳವಾದ ಕತೆ ಚಿತ್ರದ್ದು. ಇಬ್ಬರು ಗೆಳೆಯರ ನಡುವಣ ಕಥೆ. ಆದರೇ ಚಿತ್ರದ ಅನುಭವವೇ ಬೇರೆ. ರಾಮಕೃಷ್ಣ ಮತ್ತು ವಿಜಯಕಾಶಿಯವರ ಜೊತೆಗೆ ಊರ ಗೌಡನ ಪಾತ್ರ ಗಮನ ಸೆಳೆದಿತ್ತು. ಸುಂದರಕೃಷ್ಣ ಅರಸ್ ಚಿತ್ರವನ್ನು ನಿರ್ದೇಶಿಸಿದ್ದರು .
ಹಾಗೆಯೇ ದೂರದರ್ಶನವೇ ಭುಜಂಗಯ್ಯನ ದಶಾವತಾರ ತೋರಿಸಿದ್ದು. ನನಗಂತೂ ಸಖತ್ ಮನರಂಜನೆ ಕೊಟ್ಟ ಚಿತ್ರವಿದು. ಹಾಗೆ ನೋಡಿದರೇ ಭುಜಂಗಯ್ಯನ ಪಾತ್ರವೇ ಅದ್ಭುತವಾದದ್ದು. ಆ ಪಾತ್ರ ಪೋಷಣೆ ಮತ್ತು ಅದನ್ನು ಲೋಕೇಶ್ ಅವರು ಅಭಿನಯಿಸಿದ ರೀತಿ ಸೂಪರ್. ಮೊದಲಿಗೆ ನೋಡಿದಾಗ ರಂಜಿಸದಿದ್ದ ಸಿನಿಮಾ ಅನಂತರ ಸುಮಾರಷ್ಟು ಸಲ ನೋಡಿಸಿಕೊಂಡಿದೆ. ಸಧ್ಯಕ್ಕೆ ಯೂ ಟ್ಯೂಬ್ ಎನ್ನುವ ವರ ನಮಗೆ ಆಗಾಗ ಸಿನಿಮಾ ನೋಡಲು ಸಿಗುವಂತೆ ಮಾಡಿದೆ . ಸಿನಿಮಾ ನೋಡಿದ ನಂತರ ಅದು ಶ್ರೀಕೃಷ್ಣ ಆಲನಹಳ್ಳಿ ಅವರ ಕತೆ ಎಂದು ತಿಳಿದು ಹುಡುಕಿಕೊಂಡು ಓದಿದ್ದೆ. ಅದರ ಸೊಗಡೆ ಬೇರೆ. ಸಿನಿಮಾದ ಸೊಬಗೇ ಬೇರೆ. ಕತೆಗೊಂದು ಚೌಕಟ್ಟಿಲ್ಲದೇ ಹರಿವ ನೀರಂತೆ ಸಾಗುತ್ತದೆ. ಅದೇ ಚಿತ್ರದ ಮತ್ತು ಕತೆಯ ತಾಕತ್ತು.
ಬಿಡುಗಡೆಯಾದ ಸಮಯದಲ್ಲಿ ಸಿನಿಮಾ ಅಂತಹ ದುಡ್ಡು ಮಾಡಲಿಲ್ಲ ಎಂದು ಕೇಳ್ಪಟ್ಟೆ. ಆದರೇ ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಚಿತ್ರ. ಲೋಕೇಶ್ ಅವರೇ ಚಿತ್ರಕತೇ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು ವಿಶೇಷ.
ದಿ ಪ್ರೊಫೆಸರ್: ಇಟಾಲಿಯನ್ ಚಲನಚಿತ್ರ
ಜಾಗತಿಕ ಸಿನಿಮಾಲೋಕದಲ್ಲಿ ಕ್ರೈಂ ಅಥವಾ ಅಪರಾಧ ಹಿನ್ನೆಲೆಯ ಕಥೆಗಳಿಗೆ ಭರಪೂರ ಬೇಡಿಕೆ ಇರುವುದು ಸತ್ಯ. ಅದರಲ್ಲೂ ಆಯಾದೇಶದ ಭೂಗತಲೋಕದ ಸಿನಿಮಾಗಳು ಯಶಸ್ವಿಯಾಗಿವೆ, ಗಲ್ಲಾಪೆಟ್ಟಿಗೆಯಲ್ಲಿ ಹಣ ಬಾಚಿವೆ. ಹಾಗೆಂದ ಮಾತ್ರಕ್ಕೆ ಕೊಲೆ – ಸುಲಿಗೆಯನ್ನೇ ತೋರಿಸಿದರೇ ಅದು ಉತ್ತಮ ಸಿನಿಮಾವಾಗಲಾರದು.
ಹಾಗೆಯೇ ಒಂದು ಮಾಫಿಯಾದ ಬಗೆಗಿನ, ಭೂಗತಜಗತ್ತಿನ ಬಗೆಗಿನ ಚಿತ್ರ ಹೇಗಿರಬೇಕೆಂಬುದಕ್ಕೆ ನಮ್ಮಲ್ಲಿ ಹಲವಾರು ಯಶಸ್ವಿ ಉದಾಹರಣೆಗಳನ್ನ ಕಾಣಬಹುದು. ಹಾಗೆ ಥಟ್ಟೆಂದು ಹೆಸರಿಸಬೇಕಾದರೆ ಅದು ಹಾಲಿವುಡ್ ನ ‘ದಿ ಗಾಡ್ ಫಾದರ್’. ಮೂರು ಭಾಗಗಳಾಗಿ ಬಂದು ಪ್ರಶಸ್ತಿ , ಪ್ರಶಂಸೆಗಳಿಸಿದ ಯಶಸ್ವಿ ಚಿತ್ರ ಗಾಡ್ ಫಾದರ್, ಭೂಗತಲೋಕದ ತಣ್ಣಗಿನ ಕ್ರೂರತನಗಳು, ಒಳದ್ವಂದ್ವಗಳು, ಕೌಟುಂಬಿಕ ಕಲಹಗಳು, ದ್ವೇಷಾಸೂಯೆ, ಮತ್ಸರಗಳು, ಬರ್ಬರತೆಗಳನ್ನು ಸಾವಧಾನದಿಂದ, ಅಷ್ಟೇ ತಣ್ಣಗೆ ನಿರೂಪಿಸಿದವನು ಪ್ರಾನ್ಸಿಸ್ ಫೋರ್ಡ್ ಕಪೋಲಾ. ಚಿತ್ರದ ‘ಓಘ’ ಕ್ಕೆ ಮಂದಗತಿಯ ನಿರೂಪಣೆ ಎಲ್ಲೂ ಅಡ್ಡಗಾಲು ಹಾಕುವುದಿಲ್ಲ. ಪ್ರತಿಯೊಂದು ದೃಶ್ಯವೂ ನಿಧಾನಕ್ಕೆ ನೋಡುಗನ ಮನದಾಳಕ್ಕಿಳಿಯುತ್ತಾ ಸಾಗಿದಂತೆ ಗಾಡ್ ಫಾದರ್ ಒಂದು ರೌಡಿಗಳ, ಭೂಗತನಾಯಕರ ಚಿತ್ರವೇ ಆದರೂ ಯಾವುದೂ ಒಂದು ಘನೋದ್ದೇಶದ ಹೋರಾಟದ ಕತೆ ಎನಿಸುವುದು ಈ ಕಾರಣದಿಂದಲೇ.!
ದಿ ಗಾಡ್ ಫಾದರ್, ಸತ್ಯಾ, ಕಂಪನಿ, ಒನ್ಸ್ ಅಪ್ ಆನ್ ಎ ಟೈಮ್ ಇನ್ ಅಮೇರಿಕಾ, ಮೀನ್ ಸ್ಟ್ರೀಟ್ ಸ್ ಮುಂತಾದ ಚಿತ್ರಗಳು ಭೂಗತಲೋಕದ ಕಥೆಯನ್ನಾಧರಿಸಿ ತೆರೆಯಲಂಕರಿಸಿ ಯಶಸ್ವಿಗೊಂಡಿವೆ. ಹಾಗೆ ಈ ಭೂಗತಲೋಕದ ಚಿತ್ರಗಳಲ್ಲಿ ವಿಶೇಷವೆನಿಸಿದ ಚಿತ್ರ ಕೆಮರಿಸ್ಟಾ ಅಥವ ದಿ ಪ್ರೊಫೆಸರ್ !. 1986 ರಲ್ಲಿ ತೆರೆಗೆ ಬಂದ ಈ ಇಟಾಲಿಯನ್ ಚಿತ್ರದ ನಿರ್ದೇಶಕ ‘ಗಿಸೆಪೆ ಟಾರ್ನ್ ಟರ್’.
‘ಗಿಸೆಪೆ ಮರಾಜೋ’ ನ ಕಾದಂಬರಿ ಆಧರಿಸಿದ ಈ ಚಿತ್ರ ಗಿಸಿಪೆಯೆ ಮೊದಲ ಚಿತ್ರ. ಪ್ರೊಫೆಸರ್ ಮೊದಲೇ ಹೇಳಿದಂತೆ ಭೂಗತಜಗತ್ತಿನ ಕಥೆಯಾಧಾರಿತ ಚಲನಚಿತ್ರ. ಯಾವುದೇ ಸ್ಟಾರ್ ಗಳಿಲ್ಲದಿರುವುದು ಈ ಚಿತ್ರದ ವಿಶೇಷ. ಹಾಗೇ ಚಿತ್ರದ ಕಥೆ ಹೂರಣ ದಟ್ಟವಾದದ್ದು. ತಂಗಿಯನ್ನು ರೇಗಿಸಿದರೆಂದು ಕೊಲೆ ಮಾಡಿಬಿಡುವ ಚಿತ್ರದ ಮುಖ್ಯಪಾತ್ರಧಾರಿ, ಅದರ ನಿಮಿತ್ತ ಜೈಲು ಪಾಲಾಗುತ್ತಾನೆ. 10 ವರ್ಷಗಳ ಜೈಲುವಾಸ ಯಾವುದೇ ಏರುಪೇರಿಲ್ಲದೆ ನೆಡೆದು ಹೋಗುತ್ತದೆ. ಜೈಲಿನಲ್ಲಿ ಇವನ ಮಾತು-ಕತೆ ಕೇಳಿದವರು ಅವನನ್ನು ಪ್ರೊಫೆಸರ್ ಎಂದೇ ಗೌರವದಿಂದ ಕರೆಯುತ್ತಿರುತ್ತಾರೆ. ಅವನಿಗೇನೊ ಹೊರಬಂದು ಭೂಗತಜಗತ್ತಿನ ಒಡೆಯನಾಗಬೇಕೆನ್ನುವ ಯಾವುದೇ ಆಮಿಷವಿರುವುದಿಲ್ಲ. ಆದರೆ ಬಿಡುಗಡೆಯಾದ ಮೇಲೆ ಹೊರಪ್ರಪಂಚಕ್ಕೆ ಕಾಲಿರಿಸಿದ ಮೇಲೆ ಮಾಡುವುದಾದರೂ ಏನು ? ಕೆಲಸ- ಉದ್ಯೋಗ-ವಿಧ್ಯಾಭ್ಯಾಸ.. ಉಹೂಂ ! ಯಾಕೆಂದರೆ ಜೈಲಿನಲ್ಲಿ ಕಳೆದ ಸಮಯ ಅಮೂಲ್ಯವಾದ ವಯಸನ್ನೇ ತಿಂದು ಹಾಕಿಬಿಟ್ಟಿರುತ್ತದೆ. ಆಗ ಯೋಚಿಸುತ್ತಾನೆ…. ಕೆಲವೊಂದು ಪ್ಲಾನ್ ಹಾಕುತ್ತಾನೆ…..ಇದು ಪ್ರೊಫೆಸರ್ ಚಿತ್ರದ ಹೂರಣ! 1961ರಿಂದ 1986 ರವರೆಗೆ ಇಟಲಿಯಲ್ಲಿ ನಡೆದ ನೈಜ ಸಂಗತಿಗಳನ್ನು ಚಿತ್ರದುದ್ದಕ್ಕೂ ಸಾಂದರ್ಭಿಕವಾಗಿ, ಬಹುಚೆನ್ನಾಗಿ ಉಪಯೋಗಿಸಿಕೊಂಡಿದ್ದಾನೆ. ನಿರ್ದೇಶಕ. ಅಷ್ಟೇ ಅಲ್ಲ, ಮೊದಲನೇ ಚಿತ್ರಕ್ಕೆ ಬಹು ಆಸಕ್ತಿಕರ ಕಥೆ ಆರಿಸಿಕೊಂಡಿರುವ ಗಿಸೆಪೆ ನಿರೂಪಣೆಯನ್ನು ಮಾತ್ರ ಅನುಭವಿ ನಿರ್ದೇಶಕನಂತೆ ನೀಟಾಗಿ, ತಣ್ಣಗೆ ಮಂದಗತಿಯಲ್ಲಿ ಮತ್ತು ಆಸಕ್ತಿಕರವಾಗಿ ಜನರ ಮುಂದಿಡುತ್ತಾ ಹೋಗುತ್ತಾನೆ. ಹಾಗೆ ಚಿತ್ರದ ಕೆಲವೆಡೆ ‘ವಿಷುವಲ್ ಮೆಟಾಫರ್’ ಗಳನ್ನು ಬಹುಚೆನ್ನಾಗಿ ಬಳಸಿಕೊಂಡು ಅಗಾಧವಾದ ಕಥೆಯನ್ನು ಮೊಟಕುಗಳಿಸಿದರೂ ಭಾವಕ್ಕೆಲ್ಲೂ ಚ್ಯುತಿ ಬರದಂತೆ ಬುದ್ಧಿವಂತಿಕೆ ಉಪಯೋಗಿಸಿದ್ದಾನೆ.
ಒಟ್ಟಿನಲ್ಲಿ ಸಿನಿಪ್ರಿಯರಾಗಲಿ, ಸಿನಿಮಾ ಕರ್ಮಿಗಳಾಗಲಿ ಒಂದಷ್ಟು ಆಸಕ್ತಿಕರ ವಿಶೇಷವಾದ ಚಲನಚಿತ್ರಗಳನ್ನು ನೋಡಬೇಕೆಂದುಕೊಂಡ ಪಕ್ಷದಲ್ಲಿ ಗಿಸೆಪೆಯಾ ಪ್ರೊಫೆಸರ್ ಸಿನೆಮಾ ಪ್ಯಾರಡಿಸೋ ಮತ್ತು ‘ದಿ ಲೆಜೆ೦ಡ ಆಫ್ 1900’ ಚಿತ್ರಗಳನ್ನ ಮೊದಲು ಪಟ್ಟಿಯಲ್ಲಿರಿಸಿಕೊಂಡರೆ ಒಳ್ಳೆಯದು. ಈ ಚಿತ್ರಗಳು ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಾಗ್ರಿಯ ಜೊತೆ ಮನರಂಜನೆ ಮತ್ತು ಸಿನಿಮಾ ವ್ಯಾಕರಣವನ್ನು ಯಶಸ್ವಿಯಾಗಿ ಹೇಳಿಕೊಡುತ್ತವೆಂದರೆ ತಪ್ಪಾಗಲಾರದು.
Chittara Chittara ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
#MustWatchMovies #TheProfessor
#ಭುಜಂಗಯ್ಯನದಶಾವತಾರ #ಸಂಗ್ಯಾಬಾಳ್ಯಾ
#kannadacinema #SangyaBalya #bhujangayyanaDashavatara #Lokesh
#Sookshmadarshini #malayalamcinema #moviereview
#fakecalls #fraudcalls #digitalarrest
#SuperstarRajinikanth #Rajanikanth
Related Stories
December 19, 2024
December 19, 2024
November 26, 2024