kukke subramanya temple
ಕುಕ್ಕೆ ಸುಬ್ರಹ್ಮಣ್ಯ : ವರ್ಷದಲ್ಲಿ ಒಂದೇ ಬಾರಿ ತೆಗೆಯುವ ’ಮೂಲಮೃತ್ತಿಕಾ ಪ್ರಸಾದ’ ಇಂದು ತೆಗೆಯಲಾಯಿತು.
ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ನ್ನು ತೆಗೆಯಲಾಯಿತು. ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರು ವಿವಿಧ ವೈದಿಕ ವಿದಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದರು.
ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೃತ್ತಿಕಾ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರು ತೆಗೆದು ಭಕ್ತಾಧಿಗಳಿಗೆ ನೀಡಿದರು. ಇದು ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದ. ಯಾವುದೇ ದೇವಳದಲ್ಲಿ ಕೂಡಾ ಇಂತಹ ಪ್ರಸಾದ ದೊರಕುವುದಿಲ್ಲ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವುದು ವಿಶೇಷ.
ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ತೆಗೆಯಲಾಗುವುದು.ಈ ಮೃತ್ತಿಕಾ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾದಿಗಳ ನಿವಾರಣೆಗೂ ಭಕ್ತ ಜನರು ಕೊಂಡೊಯ್ಯುತ್ತಾರೆ.ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾಧಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ತಡೆಯುವುದು ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ.
ಸತತ 13 ನೇ ಬಾರಿಗೆ ಆದಾಯದಲ್ಲಿ ಪ್ರಥಮ ಸ್ಥಾನ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023-24ರ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ. ಆದಾಯ ಗಳಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ಒನ್ ದೇವಸ್ಥಾನವಾಗಿ ಮುಂದುವರಿದಿದೆ. ಕಳೆದ ವರ್ಷ ದೇವಸ್ಥಾನವು 123 ಕೋಟಿ ರೂ. ಆದಾಯ ಗಳಿಸಿತ್ತು.
ಉಳಿದಂತೆ ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ 68.23 ಕೋಟಿ ರೂ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ ರೂ., ಸವದತ್ತಿ ರೇಣುಕಾ ಯಲ್ಲಮ್ಮ 25.80 ಕೋ.ರೂ., ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ 15.27 ಕೋ.ರೂ., ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ 16.29 ಕೋ.ರೂ., ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ 13.65 ಕೋ.ರೂ., ಬೆಂಗಳೂರಿನ ಬನಶಂಕರಿ ದೇವಸ್ಥಾನ 11.37 ಕೋ.ರೂ. ಆದಾಯ ಗಳಿಸಿದೆ.
ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋಟದ ಉತ್ಪನ್ನ ದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿ ಯಿಂದ, ಹರಕೆ ಸೇವೆಗಳಿಂದ, ಅನು ದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆಗಳಿಂದ ಆದಾಯ ಬರುತ್ತಿದೆ. ದೇವಸ್ಥಾನದ ಆದಾಯದ ಒಟ್ಟು ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಉಳಿದಂತೆ ಸೇವೆ ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ನಡೆಯುತ್ತಿದ್ದು ಈ ಲೆಕ್ಕಾಚಾರವು ಇನ್ನೆರಡು ದಿನಗಳಲ್ಲಿ ದೊರಕಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಾಬಾದ್ ಮೂಲದ ದಾನಿಗಳು ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದರು. ಇದರ ಒಟ್ಟು ತೂಕ 3. ಕೆಜಿ 400ಗ್ರಾಂ ಇದ್ದು, ಒಟ್ಟು ಮೊತ್ತ 75 ಲಕ್ಷ.
ಈ ನೂತನ ಚಿನ್ನದ ಪ್ರಭಾವಳಿಯಲ್ಲಿ ನಿನ್ನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಜರುಗಿತು.
ಕುಮಾರಪರ್ವತದ ತಪ್ಪಲಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾದುಕೆಗೆ ಪೂರ್ವ ಶಿಷ್ಟ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ವರ್ಷಕ್ಕೆ ಒಂದು ಬಾರಿ ಮಾತ್ರ ಕುಕ್ಕೆ ದೇಗುಲದ ವತಿಯಿಂದ ಇಲ್ಲಿ ಪೂಜೆ ನೆರವೇರುತ್ತದೆ.
ಪೌರಾಣಿಕ ಹಿನ್ನೆಲೆ:
ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ತಾರಕಾದಿ ರಾಕ್ಷಸರನ್ನು ಕುಮಾರಸ್ವಾಮಿ ಈ ಪರ್ವತ ಶ್ರೇಣಿಯಲ್ಲೇ ವಧೆ ಮಾಡಿದನು. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ “ಬಹುಳ ಷಷ್ಠಿ”ಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ.
ದೇಶದ ಮೂಲೆ ಮೂಲೆಯಿಂದ ಚಾರಣ ಪ್ರಿಯರು ಪ್ರಕೃತಿ ಮಾತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕುಮಾರಪರ್ವತಕ್ಕೆ ಬರುತ್ತಾರೆ. ಇದು ಕೇವಲ ಚಾರಣಕಷ್ಟೇ ಜನಪ್ರಿಯವಾಗದೆ, ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ.
ಇಂತಹ ಪುಣ್ಯ ಸ್ಥಳಕ್ಕೆ ಚಾರಣ ತೆರಳುವವರು ಬೆಟ್ಟವನ್ನು ಪೂಜ್ಯ ಭಾವನೆಯಿಂದ ನೋಡಿ ಹಾಗೂ ಚಾರಣದ ಉದ್ದಕ್ಕೂ ಕಸ ಎಸೆದು ಬೇಜವಾಬ್ದಾರಿ ತನ ಮೆರೆಯಬೇಡಿ. ನೀವು ಬಳಸಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ನೀವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
ಕುಕ್ಕೆ ನೀರು ಬಂಡಿ ಉತ್ಸವಕ್ಕೆ ಕ್ಷಣಗಣನೆ :
ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದ ಹೊರಾಂಗಣದಲ್ಲಿ ನೀರು ತುಂಬಿಸಲಾಗುತ್ತಿದ್ದು, ಈ ನೀರಿನಲ್ಲಿ ಇಂದು ರಾತ್ರಿ ಶ್ರೀ ದೇವರ ಬಂಡಿ ಉತ್ಸವ ನಡೆಯಲಿದೆ. ಬೇರೆ ಯಾವ ದೇವಾಲಯಗಳಲ್ಲೂ ನೋಡಲು ಸಿಗದ ಒಂದು ವಿಶೇಷ ಉತ್ಸವ ಇದಾಗಿದ್ದು, ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಮುಕ್ತಾಯವಾಗುತ್ತದೆ . ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ತುಂಬಿದ ನೀರಿನಲ್ಲಿ ಆನೆ “ಯಶಸ್ವಿನಿ” ನೀರಾಟವಾಡುತ್ತದೆ, ನಂತರ ದೇವರ ಪಾಲಕಿ ಉತ್ಸವದ ಬಳಿಕ ಶೇಷವಾಹನಯುಕ್ತ “ನೀರು ಬಂಡಿ ಉತ್ಸವ” ಜರಗಲಿದೆ.
ಕುಕ್ಕೆ ಸುಬ್ರಹ್ಮಣ್ಯದ ಸುಂದರ ಹಾಗೂ ಬ್ರಹತ್ ರಥಗಳ ಹಿಂದಿದೆ ಆದಿವಾಸಿ ಮಲೆಕುಡಿಯ ಜನಾಂಗದ ಅದ್ಭುತ ಕೈಚಳಕ.
ಹಗ್ಗ ಬಳಸದೆ, ಗಂಟು ಬಿಗಿಯದೆ ರಥ ನಿರ್ಮಾಣ!
ಹೂವಿನಂತೆ ಬೆತ್ತ ಸುರಿದು, ಯಾವುದೇ ಗಂಟುಗಳಿಲ್ಲದೆ, ಹಗ್ಗ ಬಳಸದೆ ಬೆತ್ತದಿಂದ ರಥ ರಚಿಸುವುದನ್ನು ನೋಡುವುದೇ ಒಂದು ಆನಂದ. ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಮೂಲ ನಿವಾಸಿಗಳ ಕೈಚಳಕದಲ್ಲಿ ಬೆತ್ತದ ತೇರು ಸುಂದರ ಕಲಾಕೃತಿಯಂತೆ ನಿರ್ಮಾಣಗೊಳ್ಳುತ್ತಿದೆ.
ನಾಗರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಚಾಲನೆ ದೊರಕಿದೆ. ಇಲ್ಲಿನ ಮೂಲ ನಿವಾಸಿಗಳಾದ ಮಲೆಕುಡಿಯರಿಂದ ಬೆತ್ತದ ರಥ ನಿರ್ಮಾಣ ನಡೆಯುತ್ತಿದೆ. ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇಗುಲದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ಗುರ್ಜಿ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಮನಸೂರೆಗೊಳಿಸುತ್ತವೆ. ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರೆ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲಭರಿತವಾಗಿ ನಿರ್ಮಿಸುವುದು ವಿಶೇಷ.
ಭಾರೀ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕುವುದಿಲ್ಲ. ಬೆತ್ತವನ್ನು ಹೂವಿನಂತೆ ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ. ತೇರನ್ನೇರುವ ವೇಳೆ ರಥದ ಸುತ್ತ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿಮಾಣ ಕಾರ್ಯದಲ್ಲಿ ಮಲೆಕುಡಿಯ ಜನಾಂಗದ ಯುವಕರು, ವೃದ್ಧರು ಉತ್ಸಾಹದಿಂದ ಭಾಗವಹಿಸುತ್ತಾರೆ.
ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ.
ಮೃತ್ತಿಕಾ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ (ಕಳೆದ 6-7 ವರ್ಷಗಳಿಂದ ಈ ಪುಣ್ಯ ಸೇವೆ ನಡೆಯುತ್ತಿಲ್ಲ) ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ದೇವರಿಗೆ ಅನ್ನದಾನ ಸುಬ್ಬಪ್ಪನೆಂಬ ನಾಮಾಭಿದಾನವಿದ್ದು, ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿ ದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ.
ಹಲವಾರು ವೈಶಿಷ್ಠ್ಯಗಳನ್ನು ಹೊಂದಿರುವ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ.
ಕ್ಷೇತ್ರದಲ್ಲಿ ಪ್ರತಿವರ್ಷ ಚಂಪಾಷಷ್ಠಿಯಂದು ನಡೆಯುವ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , 10 ಕಿಮೀ ದೂರದ ಏನೆಕಲ್ಲು- ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತವೆ. ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯ ದಿನ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುವುದು ಇಲ್ಲಿ ಪ್ರತಿವರ್ಷ ನಡೆಯುವ ವಾಡಿಕೆಯಾಗಿದೆ.
ದೈವವು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ. ದೇವಸ್ಥಾನದ ಆವರಣದಲ್ಲಿ ಇಂದು ನಡೆದ ಪುರುಷರಾಯ ದೈವದ ಕೋಲದ ಬಳಿಕ ದೈವವು ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದ ಬಳಿಗೆ ಬಂದು ದೇವರ ಮೀನುಗಳಿಗೆ ನೈವೇದ್ಯ ಹಾಕುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಇಂತಹ ಪವಿತ್ರ ನದಿಗೆ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ದಯವಿಟ್ಟು ಎಸೆದು ಅಪವಿತ್ರ ಗೊಳಿಸಬೇಡಿ 🙏
ಟೀಮ್ ಇಂಡಿಯಾದ ಪ್ರಸಿದ್ಧ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಸಾರ ಸಮೇತರಾಗಿ ಭೇಟಿ ಕೊಟ್ಟು ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ನೆರವೇರಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ- 2024
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್- 27 ರಿಂದ ಡಿಸೆಂಬರ್- 12 ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಜಾತ್ರಾ ಉತ್ಸವಾದಿಗಳ ವಿವರ:
ನ.27- ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
ನ.30- ಲಕ್ಷದೀಪೋತ್ಸವ
ಡಿ.01- ಶೇಷವಾಹನೋತ್ಸವ
ಡಿ.02- ಅಶ್ವವಾಹನೋತ್ಸವ
ಡಿ.03- ಮಯೂರ ವಾಹನೋತ್ಸವ
ಡಿ.04- ಶೇಷವಾಹನೋತ್ಸವ
ಡಿ.05- ಹೂವಿನ ತೇರಿನ ಉತ್ಸವ
ಡಿ.06- ಪಂಚಮಿ ರಥೋತ್ಸವ
ಡಿ.07- ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ
ಡಿ.08- ಅವಭೃತೋತ್ಸವ, ನೌಕಾವಿಹಾರ
ಡಿ.12- ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ.
ಜಾತ್ರಾ ಮಹೋತ್ಸವ ಸಮಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಈ ಪರ್ವದ ಹೊರಾಂಗಣ ಉತ್ಸವ ಇಂದು ಪ್ರಾರಂಭಗೊಂಡಿತು.
ದೀಪಾವಳಿಯ ಕಾರ್ತಿಕ ಶುದ್ಧ ಪಾಡ್ಯದ ದಿನವಾದ ಇಂದು ಹೊಸ ಪರ್ವ ಆರಂಭಗೊಂಡಿದ್ದು, ಶ್ರೀ ದೇವರ ಉತ್ಸವಗಳು ಮುಂದಿನ ಪರ್ವದ ತನಕ ನಡೆಯಲಿದೆ.
ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಹೊಸ್ತಾರೋಗಣೆ” ನಡೆಯಿತು.
ತುಳುನಾಡಿನಲ್ಲಿ ಕುರಲ್ ಪರ್ಬ ( ತೆನೆಹಬ್ಬ) ವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಇಂದು ಬೆಳಗ್ಗೆ ತೆನೆಯನ್ನು ದೇಗುಲಕ್ಕೆ ತಂದು, ಪೂಜೆ ಸಲ್ಲಿಸಿ ನಂತರ ಸ್ಥಳೀಯರಿಗೆ ಹಂಚಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಹೊಸ ಅಕ್ಕಿ ಪ್ರಸಾದ ನೀಡಲಾಗುವುದು.
ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದಲ್ಲಿ ಶ್ರೀ ದೇವರಿಗೆ ಅಭಿಷೇಕ ನಡೆಯಿತು, ಅಭಿಷೇಕದ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.
ಇಂದು ಕುಕ್ಕೆ ಸುಬ್ರಹ್ಮಣ್ಯದ ಯುವಕ ಅಜಿತೇಶ್ ಪಿ.ಎಸ್ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ – Lieutenant officer ಆಗಿ ನಿಯುಕ್ತಿಗೊಂಡರು.
ಭಾರತದ ಅತ್ಯಂತ ಕಠಿಣ ಪರೀಕ್ಷೆಯಾದ SSB (UPSC) ಯಲ್ಲಿ ಉತ್ತೀರ್ಣರಾಗಿ, ಒಂದು ವರ್ಷಗಳ ಕಾಲ “ಅಧಿಕಾರಿಗಳ ತರಬೇತಿ ಅಕಾಡೆಮಿ”(OTA) ಯಲ್ಲಿ ತರಬೇತಿ ಪಡೆದು, ಇಂದು Passing Out Parade ನಡೆಯಿತು.
ಇವರು ಕುಕ್ಕೆ ಸುಬ್ರಹ್ಮಣ್ಯದ ನೂಚಿಲದ ಶ್ರೀಕೃಷ್ಣ ಶರ್ಮ (ನಿವೃತ್ತ ಮುಖ್ಯೋಪಾಧ್ಯಾಯರು) ಹಾಗೂ ವಿದ್ಯಾರತ್ನ ಮೇಡಂ(ಮುಖ್ಯೋಪಾಧ್ಯಾಯರು) ರವರ ಪುತ್ರ. ಪಾಸಿಂಗ್ ಔಟ್ ಪರೇಡ್ ಕಾರ್ಯಕ್ರಮದಲ್ಲಿ ಅಜಿತೇಶ್ ರವರ ಕುಟುಂಬಸ್ತರು ಭಾಗವಹಿಸಿದರು.
ಚಿಕ್ಕ ವಯಸ್ಸಿನಲ್ಲೇ ಸೇನೆಗೆ ಸೇರುವ ಆಸೆಯಿಟ್ಟುಕೊಂಡಿದ್ದ ಅಜಿತೇಶ್ ರವರ ಕನಸು ಇಂದು ನನಸಾಗಿದೆ. ನಮ್ಮ ಊರಿನ ಯುವಕನ ಸಾಧನೆ ಇಂದು ರಾಜ್ಯಕ್ಕೆ ಹೆಮ್ಮೆ ತಂದಿದೆ.
ನಿಮ್ಮ ಸಾಧನೆಗೊಂದು ಸಲಾಮ್ 🫡 🇮🇳
#nammasubrahmanya #kukkesubramanya #indianarmy
ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು🐍🙏
#nammasubrahmanya
ಇನ್ನಷ್ಟು ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://appopener.com/yt/czr1iyjdi
#nammasubrahmanya
#nammasubrahmanya
#nammasubrahmanya
#nammasubrahmanya
#nammasubrahmanya
#nammasubrahmanya
Related Stories
December 19, 2024
December 19, 2024
December 19, 2024