Karnataka news
ಅರವಿಂದ ಸ್ವಾಮಿ ಎನ್ನುವ ಸುರುದ್ರೂಪಿ ನಾಯಕ ನಟ ಯಾರಿಗೆ ಗೊತ್ತಿಲ್ಲ ಹೇಳಿ ? ತಲಪತಿ , ರೋಜಾ ದಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ಇವರು ಚಿತ್ರರಂಗ ಪ್ರವೇಶಿಸಿದ್ದು ೯೧ ರಲ್ಲಿ , ಎರಡು ಸಾವಿರದ ವೇಳೆಗೆ ಇವರ ಚಿತ್ರಗಳು ಒಂದರ ಮೇಲೊಂದು ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿದ ಕಾರಣ ಆಕ್ಟಿಂಗ್ ತೊರೆಯುತ್ತಾರೆ . ಬದುಕೇ ಹೀಗೆ ಯಾವ ಕ್ಷಣದಲ್ಲಿ ಮಗ್ಗುಲು ಬದಲಾಯಿಸುತ್ತದೆ ಗೊತ್ತಾಗುವುದಿಲ್ಲ. ಅಯ್ಯೋ ನನ್ನ ಹಣೆಬರಹವೇ ಎಂದು ಸ್ವಾಮಿ ಅಳುತ್ತಾ ಕೂರಲಿಲ್ಲ. ಇರಲಿ ನನಗೂ ಸಮಯ ಬರುತ್ತದೆ ಎಂದುಕೊಂಡು ತಮ್ಮನ್ನು ತಾವು ಬ್ಯುಸಿನೆಸ್ನಲ್ಲಿ ತೊಡಗಿಸಿಕೊಳ್ಳುತ್ತಾರೆ. ೨೦೦೫ ರಲ್ಲಿ ಟ್ಯಾಲೆಂಟ್ ಮ್ಯಾಕ್ಸಿಮಸ್ ಎನ್ನುವ ಪೇ ರೋಲ್ ಪ್ರೋಸೆಸ್ ಮಾಡುವ ಸಂಸ್ಥೆ ತೆರೆಯುತ್ತಾರೆ. ಇಂದಿಗೆ ಈ ಸಂಸ್ಥೆ ಹತ್ತಿರತ್ತಿರ ಮೂರುವರೆ ಸಾವಿರ ಕೋಟಿ ರೆವೆನ್ಯೂ ಹೊಂದಿದೆ. ವ್ಯಾಪಾರ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದ ನಂತರ ೨೦೧೫ ರಲ್ಲಿ ಮರಳಿ ಚಲಚಿತ್ರದಲ್ಲಿ ನಟನೆಯಲ್ಲಿ ತೊಡಗಿ ಕೊಂಡಿದ್ದಾರೆ. ನಿಯಮಿತವಾಗಿ ನಟಿಸುತ್ತಾ ಅಲ್ಲೂ ಯಶಸ್ಸು ಕಂಡುಕೊಂಡಿದ್ದಾರೆ.
ಇವತ್ತು ಇವರ ಕಥೆ ಹೇಳಲು ಮುಖ್ಯ ಕಾರಣವಿದೆ. ನಮ್ಮಲ್ಲಿ ಬಹುತೇಕರು ನಿಮ್ಮ ಪ್ಯಾಶನ್ ಫಾಲೋ ಮಾಡಿ ಎನ್ನುತ್ತಾರೆ. ಇವತ್ತಿಗಂತೂ ಇದು ಅತ್ಯಂತ ಅಬ್ಯುಸ್ ಆಗಿರುವ ಪದವಾಗಿ ಹೋಗಿದೆ. ಅರವಿಂದ ಸ್ವಾಮಿ ಪ್ಯಾಶನ್ ನಟನೆ , ಆದರೇನು ಮಾಡುವುದು ಅಲ್ಲಿ ಆತನಿಗೆ ಬಯಸಿದ ಫಲಿತಾಂಶ ಸಿಗಲಿಲ್ಲ. ಅವರು ಬ್ಯುಸಿನೆಸ್ಗೆ ಹೊರಳಿ ಕೊಂಡರು. ಅಲ್ಲಿ ಯಶಸ್ಸು ಕಂಡರು , ಈಗ ನೋಡಿ ಮತ್ತೆ ಅವರು ನಟಿಸುತ್ತಿದ್ದಾರೆ. ಯಶಸ್ಸು ಅವರ ಬೆನ್ನ ಹಿಂದೆ ಬಿದ್ದಿದೆ.
ಸಾರಾಂಶವಿಷ್ಟೇ , ಪ್ಯಾಶನ್ ಹಿಂದೆ ಹೋಗುವುದು ತಪ್ಪಲ್ಲ , ಅಲ್ಲಿ ಯಶಸ್ಸು ಸಿಗಲಿಲ್ಲ ಎಂದು ಅಳುತ್ತಾ ಕೂರುವುದು ತಪ್ಪು. ಬದುಕು ಕೇಳುವ ವಾಟ್ ನೆಕ್ಸ್ಟ್ ? ಎನ್ನುವ ಪ್ರಶ್ನೆಗೆ ನಾವು ಸನ್ನದ್ಧರಾಗಿರಬೇಕು. ಅದೇ ಜೀವನ , ಅದು ನಿಜವಾದ ಪ್ಯಾಶನ್ . ಎಂತಹುದೇ ಸನ್ನಿವೇಶದಲ್ಲೂ ಬದುಕನ್ನು ಪ್ರೀತಿಸುವುದು ಬಿಡದೆ ಇರುವುದು ನಿಜವಾದ ಪ್ಯಾಶನ್ . ಹುಟ್ಟುದವರೆಲ್ಲಾ ಸಾಯಲೇ ಬೇಕು ಅದು ವಿಧಿ ನಿಯಮ. ಆದರೆ ಸಾಯೋಕೆ ಮುಂಚೆ ಒಂದೊಳ್ಳೆ ಬದುಕನ್ನು ಬಾಳುವುದಕ್ಕಿಂತ ಮಹತ್ತರ ಸಾಧನೆ ಬೇರೇನೂ ಇಲ್ಲ.
ಇವರ ಜೊತೆಗೆ ಇಂತಹುದೇ ಸಾಧನೆ ಮಾಡಿದ ಇನ್ನೊಬ್ಬ ಕಲಾವಿದ ವಿವೇಕ್ ಒಬೆರಾಯ್. ವಿವೇಕ್ ಮಾಡೆಲಿಂಗ್ ಮಾಡುತ್ತಾರೆ. ಸ್ಟಾಕ್ ಮಾರ್ಕೆಟ್ ನಲ್ಲಿ ಒಂದಷ್ಟು ವರ್ಷ ಸವೆಸುತ್ತಾರೆ. ಚಿತ್ರ ನಟರಾಗಿ ಒಂದಷ್ಟು ವರ್ಷ ಕಳೆಯುತ್ತಾರೆ. ಕೈ ಇಟ್ಟ ಕಡೆಯೆಲ್ಲಾ ಅವರು ಯಶಸ್ಸು ಕೂಡ ಕಾಣುತ್ತಾರೆ. ಆದರೆ ಬಾಲಿವುಡ್ ನ ರಾಜಕೀಯ ಅವರ ಬದುಕಿಗೆ ಬಹು ದೊಡ್ಡ ತಿರುವನ್ನು ನೀಡುತ್ತದೆ. ಆತನಲ್ಲಿದ್ದ ಬಿಸಿನೆಸ್ ಮ್ಯಾನ್ ಕೆಲಸ ಶುರು ಮಾಡಿಕೊಳ್ಳುತ್ತಾನೆ. ಇಂದಿಗೆ ಆತ ಹಲವಾರು ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ದುಬೈ ನಲ್ಲಿ ನೆಲಸಿ ಅಲ್ಲಿನ ರಿಯಲ್ ಎಸ್ಟೇಟ್ ವ್ಯಾಪಾರದಲ್ಲೂ ಯಶಸ್ಸು ಕಾಣುತ್ತಿದ್ದಾರೆ.
ಕನ್ನಡ ಶಿಕ್ಷಕನಾಗಿ , ಬರಹಗಾರನಾಗಿ ಬದುಕಬೇಕು ಎನ್ನುವುದು ನನ್ನ ಪ್ಯಾಶನ್ ಆಗಿತ್ತು. ಅಣ್ಣ (ಅಪ್ಪ ) ಅದೆಲ್ಲ ಸರಿ ಕಣಯ್ಯಾ ಭಟ್ಟ , ಊಟಕ್ಕೆ ಏನು ಮಾಡುವೆ ? ಎಂದು ಕೇಳಿದ್ದರು. ಅಣ್ಣನ ಬುದ್ದಿ ಮಾತು ನನ್ನ ಬದುಕಿನ ದಾರಿಯನ್ನು ಕೂಡ ಬದಲಿಸಿತು. ಇಪ್ಪತ್ತು ವರ್ಷ ಕಾರ್ಪೊರೇಟ್ ಬದುಕಿನ ನಂತರ ನನ್ನ ಪ್ಯಾಶನ್ ಬರಹಕ್ಕೆ ಹೊರಳಿದ್ದೇನೆ. ಇವತ್ತು ಪ್ಯಾಶನ್ ಹೆಸರಿನಲ್ಲಿ ಬದುಕು ಕಟ್ಟಿ ಕೊಳ್ಳಲು ಹೆಣಗುವ ಮಕ್ಕಳ ಕಂಡಾಗ ಇಷ್ಟೆಲ್ಲಾ ಹೇಳಬೇಕು ಎನಿಸಿತು.
ಹೋಗುವ ಮುನ್ನ : ಇದು ಕೇವಲ ನನ್ನ ಅನಿಸಿಕೆ. ನಿಮ್ಮ ಇಷ್ಟದ ಬದುಕು ಬದುಕುವ ಹಕ್ಕು ನಿಮಗಿದೆ. ನಾಲ್ಕು ಜನಕ್ಕೆ ಪ್ರೇರಣೆಯಾಗಲಿ ಎಂದು ಇಂತಹ ವಿಷಯ ಬರೆಯುತ್ತೇನೆ ಅಷ್ಟೇ. ಮಿಕ್ಕಂತೆ ನಾನು ಸದಾ ಹೇಳುವುದು ಅವರವರ ತಲೆಗೆ ಅವರವರ ಕೈ .
ಶುಭವಾಗಲಿ
ಶುಭವಾಗಲಿ
ನನ್ನ ಮಾತು – ಪ್ರವೇಶಿಕೆ
ನವೆಂಬರ್ ತಿಂಗಳ ಪ್ರಥಮ ದಿನದಲ್ಲಿ, ಮೈಸೂರಿನ ರಸ್ತೆಯಲ್ಲಿ, ಸಂಜೆಯ ನಡಿಗೆಯಲ್ಲಿ ‘ ಜಪಾನ್ ಹೋಗೋಣವೇ ?’ ಎನ್ನುವ ಸನ್ಮಿತ್ರ ರವಿಯವರ ಮಾತಿಗೆ ಕ್ಷಣ ಕೂಡ ಯೋಚಿಸದೆ ಓಕೆ ಎಂದಿದ್ದೆ. ಆಶ್ಚರ್ಯ ಎನ್ನಿಸಬಹುದು. ನವೆಂಬರ್ ೧೬ ರಂದು ನಾವು ಜಪಾನಿಗೆ ಹೊರಟಿದ್ದೆವು ! ಕೆಲವೊಮ್ಮೆ ತಿಂಗಳುಗಳ ಪ್ಲಾನ್ ವರ್ಕ್ ಔಟ್ ಆಗುವುದಿಲ್ಲ. ಕೆಲವೊಮ್ಮೆ ಚಿಟಿಕೆ ಹೊಡೆಯುವಷ್ಟರಲ್ಲಿ ಕೆಲಸ ಆಗಿ ಹೋಗುತ್ತದೆ. ಇದು ದೈವಲೀಲೆ ಎನ್ನುವುದು ನನ್ನ ನಂಬಿಕೆ. ಕೈಯಲ್ಲಿ ಪುಡಿಗಾಸು ಇಲ್ಲದ , ವಿದೇಶ ಪ್ರವಾಸ ದೂರದ ಮಾತಾಯ್ತು , ಭಾರತದಲ್ಲಿನ ನಗರಗಳನ್ನು ನೋಡುವ ಕನಸು ಕೂಡ ಕಾಣಲು ಶಕ್ತನಾಗಿರದೆ ಇದ್ದ ನನಗೆ ಜಗತ್ತಿನ ೧/೩ ಭಾಗ ದೇಶಗಳನ್ನು ಸುತ್ತುವ ಯೋಗ ಬಂದದ್ದಾದರೂ ಹೇಗೆ ? ಬೀಚಿ ಅವರು ಒಂದು ಕಡೆ, ‘ ಮೆತ್ತನೆಯ ಹುಲ್ಲು ತಿನ್ನುವ ಎಮ್ಮೆಯ ಮೈ ಗಟ್ಟಿಗಿದೆ , ಗಟ್ಟಿಯ ರೊಟ್ಟಿ ತಿನ್ನುವ ಮನುಷ್ಯನ ಮೈ ಮೆತ್ತಗಿದೆ, ಇದು ದೈವಲೀಲೆ’ ಎಂದು ಬರೆಯುತ್ತಾರೆ. ಕೆಲವೊಂದನ್ನು ಬಂದಂತೆ ಸ್ವೀಕರಿಸಬೇಕು. ನನ್ನ ಬದುಕು ಪೂರ್ಣ ಈ ರೀತಿಯ ಅಚಾನಕ್ಕು ತಿರುವುಗಳಿಂದ ತುಂಬಿದೆ. ಕೈಯಲ್ಲಿ ಪಾಸ್ಪೋರ್ಟ್ ಕೂಡ ಇರದ ನನಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದು , ವಾರದಲ್ಲಿ ಪಾಸ್ಪೋರ್ಟ್ ಮಾಡಿಸಿಕೊಂಡು ಮುಂದಿನ ೧೫ ದಿನದಲ್ಲಿ ದೇಶ ಬಿಟ್ಟದ್ದು , ಎಲ್ಲವೂ ಕೇವಲ ನನ್ನ ಪ್ರಯತ್ನದಿಂದ ಖಂಡಿತ ಆದದ್ದಲ್ಲ. ಅದು ದೈವೇಚ್ಛೆ. ಜಪಾನ್ ಕೂಡ ಹೀಗೆ ಎರಡು ನಿಮಿಷದ ಮಾತಿನಲ್ಲಿ ನಿರ್ಧಾರವಾದ ಪ್ರಯಾಣ.
ಮನುಷ್ಯನ ಬದುಕಿನಲ್ಲಿ ಒಂದಷ್ಟು ಕೊರತೆ ಇರಬೇಕು. ಆ ಕೊರತೆಯನ್ನು ನೀಗಿಸಿ ಕೊಳ್ಳುವ ಹಸಿವು ಆಗ ತಾನಾಗೇ ಹುಟ್ಟುತ್ತದೆ.ಎಲ್ಲವೂ ಇದ್ದಾಗ ಮನಸ್ಸಿನಲ್ಲಿ ಒಂದು ರೀತಿಯ ಜಡತ್ವ , ಸೋಮಾರಿತನ ಆವರಿಸಿ ಬಿಡುತ್ತದೆ. ಹೀಗಾಗಿ ಬದುಕಿಗೆ ಕೊರತೆ ,ಒಂದಷ್ಟು ಬಡತನ ಇರುವುದು ಒಳ್ಳೆಯದು ಎಂದು ನನ್ನ ಭಾವನೆ. ಹಸಿದ ಹೊಟ್ಟೆ ತುಂಬಿದ ಹೊಟ್ಟೆಗಿಂತ ಸಾವಿರ ಪಾಲು ವಾಸಿ ಎನ್ನುವ ಜ್ಞಾನ ಹೊಟ್ಟೆ ತುಂಬಿದ ನಂತರ ಬಂದದ್ದು ಎನ್ನುವುದು ಮಾತ್ರ ವಿಪರ್ಯಾಸ.
ಅನ್ನ ತಿಂದರೆ ಅಕ್ಕಿ ಹೆಚ್ಚು ಖರ್ಚಾಗುತ್ತೆ ಅಂತ ಬೆಳಿಗ್ಗೆ ಅನ್ನ ಬಸಿದು ಅದರ ನೀರನ್ನು ಗಂಜಿಯ ರೂಪದಲ್ಲಿ ಕುಡಿಯುತ್ತಾ, ಬೇಸಿಗೆ ರಜೆಯಲ್ಲಿ ಸೇಠು ಅಂಗಡಿಯಲ್ಲಿ ಗ್ರಾಹಕರು ಬಂದು ತೆಗೆಸಿ ಗುಡ್ಡೆ ಹಾಕಿದ ಸೀರೆ ಇರಬಹುದು ಅಥವಾ ಇತರೆ ಬಟ್ಟೆ ಬರೆಗಳ ಎತ್ತಿ ಸ್ವಸ್ಥಾನ ಸೇರಿಸುವ ಕೆಲಸ ಮಾಡುತ್ತಾ, ಉಳಿದ ದಿನಗಳಲ್ಲಿ ನ್ಯೂಸ್ ಪೇಪರ್ ನಲ್ಲಿ ಎನ್ವಲಪ್ ತಯಾರಿಸಿ ಮೆಡಿಕಲ್ ಶಾಪುಗಳಿಗೆ ಹತ್ತು ರುಪಾಯಿಗೆ ಸಾವಿರ ಎನ್ವಲಪ್ ಮಾರುವ ಕೆಲಸ ಮಾಡುತ್ತಾ, ಅಮ್ಮ ಹಾಕಿದ ಉಪ್ಪಿನಕಾಯಿ, ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳ ಗ್ರಾಹಕರಿಗೆ ತಲುಪಿಸುವ ಹುಡುಗನಾಗಿ ಹೀಗೆ ಕಳೆದು ಹೋಯಿತು ನನ್ನ ಬಾಲ್ಯ . ಕಾಲೇಜಿಗೆ ಬಂದರೂ ಕಾಲಿಗೆ ಒಳ್ಳೆಯ ಚಪ್ಪಲಿ ಕಂಡಿರಲಿಲ್ಲ . ಬಸ್ ಪಾಸ್ ಆಗುವವರೆಗೆ ಹತ್ತಾರು ಕಿಲೋಮೀಟರ್ ಕಾಲೇಜಿಗೆ ನೆಡೆದೆ ಹೋಗುತ್ತಿದ್ದೆ . ಜೀವನದ ಪ್ರಥಮ ೨೨ ವರ್ಷ ಪಕ್ಕದ ಮೈಸೂರು ದೂರದ ಮಾತಾಯಿತು ಬೆಂಗಳೂರಿನ ಎಂಜಿ ರಸ್ತೆ ಕೂಡ ನೋಡಿರಲಿಲ್ಲ. ನನಗೆ ಪ್ರಥಮ ಬಾರಿಗೆ ಎಂಜಿ ರಸ್ತೆ ತೋರಿಸಿದ್ದು ನಮ್ಮ ರಾಮು ಮಾವ Rama Chandra , ಚಾಮರಾಜಪೇಟೆ ರಾಮು ಮಾವ ! ನಂತರದ ೨೪ ವರ್ಷದಲ್ಲಿ ೬೭ ದೇಶ ನೋಡುವ ಭಾಗ್ಯ ಸಿಕ್ಕಿತು ಎಂದರೆ ಕೆಲವೊಮ್ಮೆ ನನಗೆ ನಂಬಿಕೆ ಬರುವುದಿಲ್ಲ .ಇದು ಬಾಲಿವುಡ್ ಚಿತ್ರದ ಕಥೆಯಿರಬಹುದು ಎನ್ನುವ ಭಾವನೆ ಎಂತವರಿಗೂ ಬರುವುದು ಸಹಜ. ಆದರೆ ಇದು ಸತ್ಯ. ಬದುಕು ನನ್ನ ಪಾಲಿಗೆ ಎರಡೂ ಮುಖವನ್ನ ಬಹಳ ಕಡಿಮೆ ಸಮಯದಲ್ಲಿ ತೋರಿಸಿದೆ. ಬಡತನವೆಂದರೆ ಅದು ಬವಣೆಯಲ್ಲ ಅದೊಂದು ಶಾಲೆ, ಅತ್ಯುತ್ತಮ ಶಿಕ್ಷಕ. ಒಬ್ಬ ವಿಧೇಯ ವಿದ್ಯಾರ್ಥಿ ಖಂಡಿತ ಅದರಿಂದ ಕಲಿಯುತ್ತಾನೆ.
ಜಪಾನ್ ದೇಶದಲ್ಲಿನ ಹಲವು ಅಚ್ಚರಿಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಳ್ಳುತ್ತಿದೆ. ಜಪಾನ್ ಇರಬಹುದು , ಪಕ್ಕದ ಜವಗನಹಳ್ಳಿ , ಮೂಕನಹಳ್ಳಿ ಇರಬಹುದು ಅಲ್ಲಿ ಕಂಡ ವಿಶೇಷ ನಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಅಭ್ಯಾಸ. ಜಪಾನ್ ದೇಶದ ವಿಶೇಷತೆಗಳನ್ನು ಕಂಡು ನನ್ನ ಪ್ರಕಾಶಕ ಮಿತ್ರ ಜಮೀಲ್ ಅವರು ವಾಟ್ಸಪ್ ನಲ್ಲಿ ‘ ಜಪಾನ್ನಲ್ಲಿ ರಂಗ ‘ ಎನ್ನುವ ಟೈಟಲ್ ಸೂಚಿಸಿ ಪುಸ್ತಕ ಮಾಡೋಣ ಎನ್ನುವ ಸಂದೇಶ ಕಳಿಸಿದ್ದರು. ಪ್ರತಿ ಕ್ಷಣವೂ , ಪ್ರತಿ ನೋಟದಲ್ಲೂ ನನಗೊಂದು ಕಥೆ ಸಿಗುತ್ತದೆ. ಎಲ್ಲವನ್ನೂ ದಾಖಲಿಸಬೇಕು ಎನ್ನುವ ಖುಷಿ ,ಉತ್ಸಾಹ ,ಭಗವಂತನ ಕೃಪೆಯಿಂದ ಇನ್ನೂ ಜೀವಂತವಾಗಿದೆ. ಹೀಗಿರುವಾಗ ‘ರೋಗಿ ಬಯಸಿದ್ದು ಹಾಲು ಅನ್ನ , ವೈದ್ಯ ಹೇಳಿದ್ದು ಹಾಲು ಅನ್ನ’ ಎನ್ನುವಂತಾಯ್ತು. ಸಂದೇಶ ನೋಡಿದ ಮರುಗಳಿಗೆ ಜಪಾನ್ನಿಂದ ಜಮೀಲ್ ಅವರಿಗೆ ಕರೆ ಮಾಡಿ ಯಸ್ ಎಂದಿದ್ದೆ. ಹೀಗಾಗಿ ಈ ಅಕ್ಷರಗಳು ಜನ್ಮಿಸುತ್ತಿವೆ.
ಜಪಾನ್ ದೇಶದ ಪ್ರವಾಸದ ಜೊತೆಗಾರರಾದ ರವಿ ಅವರಿಗೆ ಧನ್ಯವಾದ ಹೇಳಿ ಮುಗಿಸಲಾಗುವುದಿಲ್ಲ. ಕಳೆದ ನನ್ನ ಎಂಟು ಪುಸ್ತಕಗಳೊಂದಿಗೆ ಅವರ ಒಡನಾಟ ಖಾಯಂ ಆಗಿದೆ. ಪುಸ್ತಕದ ಹೂರಣದ ಚರ್ಚೆ ಸದಾ ಆಗುತ್ತಿರುತ್ತದೆ. ಪುಸ್ತಕದ ಹುಟ್ಟಿಗೆ ಕಾರಣರಾದ ಜಮೀಲ್ ಜೀ ಅವರಿಗೆ ಮತ್ತು ಅವರ ಶ್ರೀಮತಿ ಶಫೀಕಾ ಅವರಿಗೆ , ನಾನು ಪ್ರೀತಿಯಿಂದ ಜಮದಗ್ನಿ ಮಹಾಮುನಿಗಳೇ ಎಂದು ಕರೆಯುವ ವಿಕ್ರಂ ಅಡಿಗರವರಿಗೆ , ನನ್ನೆಲ್ಲಾ ಪುಸ್ತಕಗಳ ಪ್ರೊಫ್ ರೀಡಿಂಗ್ ಜೊತೆಗೆ , ಮೊದಲ ಅಭಿಪ್ರಾಯ ತಿಳಿಸುವ ನಿವೇದಿತಾ ಮೇಡಂ ಅವರಿಗೆ , ನನ್ನೆಲ್ಲಾ ಬರಹಗಳನ್ನು ಓದಿ ಆಸ್ವಾದಿಸಿ ಸದಾ ಬೆಂಬಲಿಸುವ ರುದ್ರಪ್ರಸಾದ್ Rudraprasad Shirangala ಮತ್ತು ರಂಜಿತಾ Ranjitha Rudraprasad ಅವರಿಗೆ , ನೆರಳಿನಂತೆ ಸದಾ ಜೊತೆಯಲ್ಲಿದ್ದು ನನ್ನ ತಪ್ಪು ಒಪ್ಪುಗಳ ತಿದ್ದುವ ಅಮ್ಮ , ರಮ್ಯಳಿಗೆ , ನನ್ನಲ್ಲಿ ಸದಾ ಉತ್ಸಾಹ ತುಂಬುವ ಮಗಳು ಅನನ್ಯಳಿಗೆ ಧನ್ಯವಾದ ಎಂದು ಹೇಳುವುದು ಕಡಿಮೆಯಾಗುತ್ತದೆ. ನೀವೆಲ್ಲಾ ನನ್ನ ಜೀವನದಲ್ಲಿರುವುದರಿಂದ ಈ ಬದುಕು ಸುಂದರವಾಗಿದೆ.
ನನ್ನ ಓದುಗ ಪ್ರಭುಗಳಿಗೆ ಶತ ಕೋಟಿ ಪ್ರಣಾಮಗಳು. ನಿಮ್ಮ ಶ್ರೀರಕ್ಷೆಯ ಕಾರಣದಿಂದ ಬರಹ ಸಾಗುತ್ತಿದೆ. ನಿಮ್ಮ ಆಶೀರ್ವಾದ ಇರುವವರೆಗೂ ಬರೆಯುತ್ತಿರುವೆ.
ಜಪಾನ್ನಲ್ಲಿ ರಂಗ ಪುಸ್ತಕವನ್ನು ಈಗಾಗಲೇ ಅರ್ಧ ಜಗತ್ತು ಸುತ್ತಿರುವ ನನ್ನ ನೆಚ್ಚಿನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರಿಗೆ Vishweshwar Bhat ಅರ್ಪಿಸುತ್ತಿದ್ದೇನೆ.
ಶುಭವಾಗಲಿ
ರಂಗಸ್ವಾಮಿ ಮೂಕನಹಳ್ಳಿ
ಮೈಸೂರು
೨/೦೧/೨೦೨೫