Indian cricket

Indian cricket
ದೇವರು ಎರಡನೇ ಅವಕಾಶ ಕೊಟ್ಟೇ ಕೊಡುತ್ತಾನೆ.. ಮತ್ತು ಕೊಟ್ಟಿದ್ದಾನೆ..!

WhatsApp IconJoin WhatsApp Channel
Telegram IconJoin Telegram Channel

ಉಳಿ ಪೆಟ್ಟು ಬಿದ್ದರಷ್ಟೇ ಶಿಲೆ ಕಲೆಯಾಗಿ ಅರಳಲು ಸಾಧ್ಯ.. ಆ ಪೆಟ್ಟು ಬೀಳದೇ ಇದ್ದಿದ್ದರೆ ಇವತ್ತು ಕರುಣ್ ನಾಯರ್ ಎಲ್ಲಿಯೋ ಕಳೆದು ಹೋಗುತ್ತಿದ್ದ.

ಅವನು ಒಂದೊಮ್ಮೆ ಕರ್ನಾಟಕ ತಂಡದ ನಾಯಕನಾಗಿ ಯಶಸ್ಸು ನೋಡಿದವನು..

ಕರ್ನಾಟಕ ಕ್ರಿಕೆಟ್’ನ ಗತವೈಭವದ ಚರಿತ್ರೆಯ ಪುಟದಲ್ಲಿ ತನ್ನದೇ ಒಂದು ಅಧ್ಯಾಯವನ್ನು ಅಚ್ಚೊತ್ತಿದವನು..

ಟೆಸ್ಟ್ ಕ್ರಿಕೆಟ್’ನಲ್ಲಿ ಎಂತೆಂಥ ದಿಗ್ಗಜರ ಕೈಯಲ್ಲೇ ಸಾಧ್ಯವಾಗದ ತ್ರಿಶತಕವನ್ನು ಬಾರಿಸಿದವನು..

ಮತ್ತು.. ಕ್ರಿಕೆಟ್ ಹೊರತಾದ ಕಾರಣಗಳಿಗೆ ಭಾರತ ತಂಡದಿಂದ ಹೊರ ಬಿದ್ದು, ಕೊನೆಗೆ ಕರ್ನಾಟಕ ತಂಡದಿಂದಲೇ ಹೊರ ತಳ್ಳಲ್ಪಟ್ಟವನು..

ಒಂದೂವರೆ ವರ್ಷ ಅವನ ಕ್ರಿಕೆಟ್ ಬದುಕಲ್ಲಿ ಅಕ್ಷರಶಃ ಕಡು ಕತ್ತಲು ಆವರಿಸಿಕೊಂಡಿತ್ತು. ಸ್ನೇಹಿತರು, ಜೊತೆಗಾರರು, ಜೊತೆ ಜೊತೆಗೇ ಆಡಿದವರು ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿದ್ದರೆ, ಕರುಣ್ ನಾಯರ್ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರು ಹಾಕುತ್ತಾ ಕೂತಿದ್ದ.

ದಾರಿಯೇ ಕಾಣದಾದಾಗ ‘’Dear Cricket, give me one more chance’’ ಎಂದು ಅಂಗಲಾಚಿದ್ದ. ಒಂದೊಮ್ಮೆ ಕ್ರಿಕೆಟ್’ಗೆ ಗೌರವ ತಂದು ಕೊಡುವಂತೆ ಆಡಿದ್ದ ಕ್ರಿಕೆಟಿಗ.. ಕರುಣ್ ನಾಯರ್ ಕೂಗು ಕ್ರಿಕೆಟ್ ದೇವತೆಗೆ ಕೇಳಿಸಿತ್ತು. ಕರ್ನಾಟಕದಲ್ಲಿ ಮುಚ್ಚಿದ ಬಾಗಿಲು ವಿದರ್ಭದಲ್ಲಿ ತೆರೆದುಕೊಂಡಿತ್ತು.

ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ 690 ರನ್ ಗಳಿಸಿ ವಿದರ್ಭ ತಂಡ ಫೈನಲ್ ತಲುಪಲು ಕಾರಣನಾಗಿದ್ದ ಕರುಣ್ ನಾಯರ್, ಈ ಬಾರಿ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ಸಾರಥ್ಯ ವಹಿಸಿದ್ದಾನೆ. ನಾಯಕನಾದವನು ಮುಂಚೂಣಿಯಲ್ಲಿ ನಿಂತು ಹೇಗೆ ತಂಡವನ್ನು ಮುನ್ನಡೆಸಬೇಕೆಂಬುದನ್ನು ಆಟದಲ್ಲಿ ತೋರಿಸುತ್ತಿದ್ದಾನೆ.

ಅಂದ ಹಾಗೆ ಈ ಬಾರಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಐದು ಪಂದ್ಯಗಳಲ್ಲಿ ಕರುಣ್ ಗಳಿಸಿರುವ ರನ್ ಎಷ್ಟು ಗೊತ್ತೇ.. ಜಸ್ಟ್ 542. ಅದರಲ್ಲಿ ಮೂರು ಹ್ಯಾಟ್ರಿಕ್ ಸೆಂಚುರಿಗಳು ಸೇರಿದಂತೆ ನಾಲ್ಕು ಶತಕಗಳು. ಐದು ಇನ್ನಿಂಗ್ಸ್’ಗಳಲ್ಲಿ ಔಟಾಗಿದ್ದೇ ಇವತ್ತು, ಉತ್ತರ ಪ್ರದೇಶ ವಿರುದ್ಧ. ಅಲ್ಲಿಯವರೆಗೆ ಅವನದ್ದು ಅಜೇಯ ಆಟ.

ಜಮ್ಮು-ಕಾಶ್ಮೀರ ವಿರುದ್ಧ: 112*
ಛತ್ತೀಸ್’ಗಢ ವಿರುದ್ಧ: 44*
ಚಂಡೀಗಢ ವಿರುದ್ಧ: 163*
ತಮಿಳುನಾಡು ವಿರುದ್ಧ: 111*
ಉತ್ತರ ಪ್ರದೇಶ ವಿರುದ್ಧ: 112

ಐದೇ ಪಂದ್ಯಗಳಿಂದ 542 ರನ್. ನಾಲ್ಕು ಶತಕ. ಸರಾಸರಿ 542.. ಎಲ್ಲಾದರೂ ಕೇಳಿದ್ದೀರಾ, ಕಂಡಿದ್ದೀರಾ..?

ಹೌದು.. ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ ನಂತರ ಕರುಣ್ ನಾಯರ್’ಗೆ ನ್ಯಾಯವಾಗಿ ಸಿಗಬೇಕಿದ್ದ ಅವಕಾಶಗಳು ಸಿಗಲಿಲ್ಲ. ಆಗ ಘೋರ ಅನ್ಯಾಯ ಮಾಡಿದರು. ಆದರೆ ರಕ್ತ ಬಸಿದು ಆಡಿದ ಕರ್ನಾಟಕ ತಂಡದಿಂದಲೇ ಹೊರ ಬಿದ್ದದ್ದೇಕೆ..? ಕಾರಣವಿದೆ. ಅದು ಅವನ ಸ್ವಯಂಕೃತ ಪ್ರಮಾದ.

ಭಾರತ ತಂಡದಲ್ಲೇನೋ ಪ್ರತಿ ಸ್ಥಾನಕ್ಕೂ ಪೈಪೋಟಿ. ಕರ್ನಾಟಕ ತಂಡದಲ್ಲಾದರೂ ಕರುಣ್ ಕಾಣಿಸಿಕೊಳ್ಳಬೇಕಿತ್ತಲ್ಲವೇ..? ಆದರೂ ಏಕೆ ತಂಡದಿಂದ ಹೊರ ಬಿದ್ದ..?

ಕರುಣ್ ನಾಯರ್’ಗೆ ಕರ್ನಾಟಕ ತಂಡದಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ತಂಡದ ನಾಯಕನೂ ಆಗಿದ್ದ. ಯಶಸ್ಸಿನ ಮೆಟ್ಟಿಲುಗಳ ಮೇಲೆ ಹೆಜ್ಜೆ ಇಡುತ್ತಾ ಸಾಗಿದವನು ಮೈಮರೆತು ಬಿಟ್ಟ. “ಕ್ರಿಕೆಟ್ ಬಾಸ್’ಗಳ ಕೃಪಾಕಟಾಕ್ಷ ನನ್ನ ಮೇಲಿದೆ, ಹೇಗೂ ತಂಡದಲ್ಲಿದ್ದೇ ಇರುತ್ತೇನೆ” ಎಂದುಕೊಂಡ. ಆದರೆ ಕ್ರಿಕೆಟ್ ಕೊಟ್ಟ ಹೊಡೆತವಿದೆಯಲ್ಲಾ..? ಕರುಣ್ ತತ್ತರಿಸಿ ಹೋದ.

ಅದು ಅವನಿಗೆ ಕ್ರಿಕೆಟ್ ಕೊಟ್ಟ ಏಟೂ ಹೌದು, ಕ್ರಿಕೆಟ್ ಕಲಿಸಿದ ಪಾಠವೂ ಹೌದು. ಕರುಣ್ ನಾಯರ್ ಬಿದ್ದಿದ್ದ ನಿಜ. ಆದರೆ ಸೋತಿರಲಿಲ್ಲ. ಬಿದ್ದು ಮೇಲೆದ್ದು ನಿಲ್ಲದಿದ್ದರೆ ಮಾತ್ರ ಅದು ಸೋಲು. ಕರುಣ್ ಮೇಲೆದ್ದು ನಿಲ್ಲುವ ಸಂಕಲ್ಪ ಮಾಡಿದ. ವಿದರ್ಭ ತಂಡದ ಬಾಗಿಲು ತಟ್ಟಿದ. ಅವನೇ ಬರೆದ ಚರಿತ್ರೆಯ ಬಲ ಬೆನ್ನ ಹಿಂದಿತ್ತು. ಕರ್ನಾಟಕದ ಪ್ರತಿಭೆಯನ್ನು ವಿದರ್ಭ ಅಪ್ಪಿಕೊಂಡಿತು.

ಕೆಲವೊಮ್ಮೆ comfort zoneನಿಂದ ಹೊರ ಬಂದಾಗಲಷ್ಟೇ ಅಸಲಿ ಶಕ್ತಿ ಹೊರ ಬರಲು ಸಾಧ್ಯ. ಕರುಣ್ ನಾಯರ್ ಎದೆಯೊಳಗಿನ ಕಿಚ್ಚು ರನ್’ಗಳ ರೂಪದಲ್ಲಿ ಧಗಧಗಿಸುತ್ತಿದೆ.

‘’ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು’’ ಎಂದು ಕೇಳಿದ್ದ ಕರುಣ್.

ಡಿಯರ್ ಕರುಣ್,
ದೇವರು ನಿನಗೆ ಎರಡನೇ ಅವಕಾಶ ಕೊಟ್ಟಿದ್ದಾನೆ. ಹೀಗೆ ಆಡುತ್ತಲೇ ಇರು. ಭಾರತ ತಂಡದಲ್ಲಿ ಮತ್ತೊ ಅವಕಾಶ ಸಿಕ್ಕರೂ ಸಿಗಬಹುದು. ಅದಿಲ್ಲವಾದರೆ ಮರಳಿ ಕರ್ನಾಟಕ ಪರ ಆಡುವ ಅವಕಾಶವಾದರೂ ಸಿಗಬಹುದು.

-ಸುದರ್ಶನ್

‘’ಮೈಕ್ ಹಿಡಿದು ಕೂತ ಕಾಮೆಂಟೇಟರ್ ಏನು ಹೇಳುತ್ತಾನೆ ಎಂಬುದರಿಂದ ನನ್ನ ಜೀವನ ಬದಲಾಗದು. ಅಥವಾ ಲ್ಯಾಪ್ ಟ್ಯಾಪ್ ಮುಂದೆ ಕೂತ, ಪೆನ್ ಹಿಡಿದ ಪತ್ರಕರ್ತನ ಅಭಿಪ್ರಾಯದಿಂದಲೂ ನನ್ನಲ್ಲೇನೂ ಬದಲಾವಣೆಯಾಗದು. ನಾವು ಯಾವಾಗ ನಿವೃತ್ತಿಯಾಗಬೇಕು, ಯಾವಾಗ ಹೊರಗೆ ಕೂರಬೇಕು, ಯಾವಾಗ ನಾಯಕತ್ವ ವಹಿಸಬೇಕು ಎಂಬುದನ್ನು ಅವರು ನಿರ್ಧರಿಸಲು ಸಾಧ್ಯವಿಲ್ಲ. ನಾನು ಸೂಕ್ಷ್ಮತೆ ಇರುವ ಪ್ರಬುದ್ಧ ಮನುಷ್ಯ, ಎರಡು ಮಕ್ಕಳ ತಂದೆ, ನನಗೂ ಬುದ್ಧಿಯಿದೆ’’.

ರೋಹಿತ್ ಶರ್ಮಾ ಆಡಿರುವ ಮಾತುಗಳಿವು.

ಹೌದು.. ‘’ಮೈಕ್ ಹಿಡಿದವರಾಗಲೀ, ಲ್ಯಾಪ್ ಟಾಪ್ ಮುಂದೆ ಕೂತವರಾಗಲೀ, ಪೆನ್ ಹಿಡಿದವರಾಗಲೀ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ರೋಹಿತ್ ಶರ್ಮಾ ಅವರೇ..

ಆದರೆ..
ನೀವು ಎರಡು ಮಕ್ಕಳ ತಂದೆ ಎಂಬುದು ಎಷ್ಟು ಸತ್ಯವೋ, ಭಾರತ ಟೆಸ್ಟ್ ತಂಡಕ್ಕೆ ನೀವು ಎಲ್ಲಾ ರೀತಿಯಿಂದಲೂ ಹೊರೆಯಾಗಿದ್ದೀರಿ ಎಂಬುದೂ ಅಷ್ಟೇ ಸತ್ಯ ಮತ್ತು ಅದೇ ಸತ್ಯ. ಆ ಸತ್ಯ ಹೇಳಿದವರ ವಿರುದ್ಧ ಉರಿದು ಬಿದ್ದಿದ್ದೀರಿ. ಆಡುವುದು ನಿಮ್ಮ ಕೆಲಸ.. ಮಾತನಾಡುವುದು, ಬರೆಯುವುದು ಅವರ ಕೆಲಸ.

ಅಂದ ಹಾಗೆ, ನೀವು ಚೆನ್ನಾಗಿ ಆಡಿದಾಗ ನಿಮ್ಮನ್ನು ಹೊಗಳಿದಾಗಲೂ ಈ ಮಾತು ಆಡಿದ್ದೀರಾ..? ‘ನಿಮ್ಮ ಅಭಿಪ್ರಾಯಗಳಿಂದ, ನಿಮ್ಮ ಅಕ್ಷರಗಳಿಂದ ನಮ್ಮಲ್ಲೇನೂ ವ್ಯತ್ಯಾಸವಾಗದು’ ಎಂದಿದ್ದೀರಿ. ಹೊಗಳಿಕೆಯನ್ನು ಆನಂದಿಸುವವರು ಟೀಕೆಗಳನ್ನು ಸ್ವೀಕರಿಸಲೂ ಸಿದ್ಧರಿರಬೇಕು. ಮಾತನಾಡುವುದು ಮೈಕ್ ಹಿಡಿದವರ ಕೆಲಸ, ಬರೆಯುವುದೇ ಪೆನ್ ಹಿಡಿದವರ ಕಾಯಕ. ನೀವು ಜವಾಬ್ದಾರಿಯಿಂದ ಆಡಿದ್ದರೆ, ಅವರೇಕೆ ಮಾತನಾಡುತ್ತಿದ್ದರು..? ಅವರೇಕೆ ಬರೆಯುತ್ತಿದ್ದರು..?’’

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ನಂತರ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಡಿರುವ ಮಾತೊಂದನ್ನು ಕೇಳಿ.

ಪ್ರಶ್ನೆ: ಭಾರತ ತಂಡ ಹೆಚ್ಚು ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡುವ ಮೂಲಕ ವಿದೇಶ ಪ್ರವಾಸಗಳಿಗೆ ತಯಾರಿ ನಡೆಸಬೇಕೇ..?

ಗವಾಸ್ಕರ್: ಈ ಪ್ರಶ್ನೆಗೆ ಉತ್ತರಿಸಲು ನಾವು ಯಾರು..? ನಮಗೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲ. ನಾವು ಕೇವಲ ಟಿವಿಗಾಗಿ ಮಾತನಾಡಿ ದುಡ್ಡು ಸಂಪಾದಿಸುವವರು. ನಮ್ಮ ಮಾತನ್ನು ಕೇಳಬೇಡಿ. ಒಂದೊಮ್ಮೆ ಕೇಳಿಸಿಕೊಂಡರೂ ಮತ್ತೊಂದು ಕಿವಿಯಿಂದ ಅದನ್ನು ಬಿಟ್ಟು ಬಿಡಿ.

ರೋಹಿತ್ ಶರ್ಮಾ ಆಡಿರುವ ಮಾತಿನ ನಂತರ ಸುನೀಲ್ ಗವಾಸ್ಕರ್ ಆಕ್ರೋಶಭರಿತರಾಗಿ ಈ ಮಾತುಗಳನ್ನು ಹೇಳಿದ್ದಾರೆ.

ಇನ್ನು ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿಚಾರ. ಅದೇ ಮಹಾ ತ್ಯಾಗ ಎಂಬಂತೆ ಬೆನ್ನುಮೂಳೆಯಿಲ್ಲದ ಕೆಲ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ ಕೆಲ ಸಿನಿಮಾ ನಟ-ನಟಿಯರು ಕೂಡ ಟ್ವೀಟ್ ಮಾಡಿ ರೋಹಿತ್ ಶರ್ಮಾಗೆ ತ್ಯಾಗರಾಜನ ಪಟ್ಟ ಕಟ್ಟಿದ್ದಾರೆ.

‘’ಅಬ್ಬಾ, ಎಂಥಾ ದಿಟ್ಟ ನಿರ್ಧಾರ.. ಅದೆಷ್ಟು ನಿಸ್ವಾರ್ಥತೆ ಆ ನಿರ್ಧಾರದಲ್ಲಿ.. ಆ ನಿರ್ಧಾರ ತೆಗೆದುಕೊಳ್ಳಲು ತುಂಬಾ ಗಟ್ಸ್ ಬೇಕು’’ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲಿದ್ದರು ಇವರೆಲ್ಲಾ..? ಈಗ ಯಾಕೆ ಬಂದರು..? ಉತ್ತರ ತುಂಬಾ ಸರಳ. ಇದು PR management. ರೋಹಿತ್ ಶರ್ಮಾನ ಪತ್ನಿ ರಿತಿಕಾ ಸಜ್’ದೇ cornerstone ಎಂಬ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆೆ. ರೋಹಿತ್ ಶರ್ಮಾ ಬಗ್ಗೆ ಟ್ವೀಟ್ ಮಾಡುತ್ತಿರುವ ಬಹುತೇಕ ಸಿನಿಮಾ ಮಂದಿಯನ್ನು ಮ್ಯಾನೇಜ್ ಮಾಡುತ್ತಿರುವುದು ಇದೇ cornerstone ಕಂಪನಿ. ಗಂಡನ ಪರವಾಗಿ ಇವರಿಂದ ಟ್ವೀಟ್ ಮಾಡಿಸಿರುವುದು ರೋಹಿತ್ ಶರ್ಮಾನ ಪತ್ನಿ ಎಂಬುದು ಗುಟ್ಟಾಗಿ ಉಳಿದಿಲ್ಲ.

ಇವೆಲ್ಲದರಿಂದ ಹಾನಿಯಾಗುತ್ತಿರುವುದು ರೋಹಿತ್ ಶರ್ಮಾ ವ್ಯಕ್ತಿತ್ವಕ್ಕೆ ಮತ್ತು ಹಾನಿ ಮಾಡಿರುವುದು ಸ್ವತಃ ಪತ್ನಿ.

ಹೇಳಿ ಕೊಟ್ಟ ಮಾತು, ಕಟ್ಟಿ ಕೊಟ್ಟ ಬುತ್ತಿ ಬಹಳ ಕಾಲ ಉಳಿಯದು. ಉಳಿಯುವುದೊಂದೇ.. ನೈಜ ವ್ಯಕ್ತಿತ್ವ.

-ಸುದರ್ಶನ್
ಅಷ್ಟಕ್ಕೂ ಈ ರೋಹಿತ್ ಶರ್ಮಾ ತಂಡಕ್ಕಿಂತ ದೊಡ್ಡವನಾ..?

ಮಾತು ಮಾತಿಗೆ ‘ವ್ಯಕ್ತಿಗಿಂತ ತಂಡ ಮುಖ್ಯ’ ಎನ್ನುತ್ತಿದ್ದವರ ನಡೆಗೂ ನುಡಿಗೂ ಅಂತರ ಅದೆಷ್ಟು ಅಜಗಜಾಂತರ..?

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಆಡದೇ ಇದ್ದಿದ್ದರೆ ಪ್ರಪಂಚವೇನಾದರೂ ಮುಳುಗಿ ಹೋಗುತ್ತಿತ್ತೇ..?

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಕೆ.ಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಾಗ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯಾನ್ ರಾಹುಲ್ ಬಳಿ ಬಂದು ಒಂದು ಪ್ರಶ್ನೆ ಕೇಳುತ್ತಾನೆ. ‘’What did you do wrong to bat one down?!”

ಭಾರತವನ್ನು ಸೋಲಿಸಲು ನಿಂತವರಿಗೆ ಅರ್ಥವಾದ ಈ ಸತ್ಯ ನಮ್ಮವರಿಗೆ ಅರ್ಥವಾಗಲಿಲ್ಲ ಎಂಬುದೇ ದೊಡ್ಡ ದುರಂತ.

ನಿಜ.. ರಾಹುಲ್ ತಪ್ಪು ಮಾಡಿದ್ದ.. ‘’ಯಾವ ಕ್ರಮಾಂಕದಲ್ಲೂ ನಾನು ಆಡಲು ಸಿದ್ಧ’’ ಎಂದು ಹೇಳಿದ್ದೇ ದೊಡ್ಡ ತಪ್ಪು. ಅದು ತಂಡಕ್ಕಾಗಿ ಅವನ ಬದ್ಧತೆ.

ಆದರೆ ತಂಡದ ನಾಯಕನಾಗಿ ರೋಹಿತ್ ಶರ್ಮಾನ ಬದ್ಧತೆಯೇನು..? ತನ್ನ ಸ್ವಾರ್ಥದ ಕಾರಣಕ್ಕೆ ಆರಂಭಿಕನಾಗಿ settle ಆಗಿರುವ ಒಬ್ಬ ಆಟಗಾರನನ್ನು ಕೆಳ ಕ್ರಮಾಂಕಕ್ಕೆ ತಳ್ಳುವುದೇ..? ತನ್ನ ಸ್ವಾರ್ಥಕ್ಕಾಗಿ ತಂಡದ ಇಡೀ ಬ್ಯಾಟಿಂಗ್ ಲೈನಪ್ ಅಲುಗಾಡುವಂತೆ ಮಾಡುವುದೇ..? ‘ಭಾರತ ತಂಡದ ಭವಿಷ್ಯದ ತಾರೆ’ ಎಂದು ಕರೆಸಿಕೊಂಡಿರುವ ಒಬ್ಬ ಯುವಕನ ಅವಕಾಶವನ್ನು ಕಸಿದುಕೊಳ್ಳುವುದೇ..?

ಅನುಮಾನವೇ ಬೇಡ.. ವೈಟ್ ಬಾಲ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ modern day great. ಬಿಳಿ ಚೆಂಡಿನ ಮುಂದೆ ಆತ ರಾಕ್ಷಸ.. ಆದರೆ ಟೆಸ್ಟ್ ಕ್ರಿಕೆಟ್..?
ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಸರಾಸರಿ ಸರಿ ಸುಮಾರು 25.

ಯಾರೇನೇ ಹೇಳಲಿ.. ದಾಖಲೆಗಳು ಸತ್ಯ ಬಿಟ್ಟು ಬೇರೇನೂ ಹೇಳುವುದಿಲ್ಲ.

6, 5, 8, 23, 2, 52, 0, 8, 18, 11, 3, 3, 6, 10, 3.

ಮಧ್ಯದಲ್ಲೊಂದು 52ನ್ನು ತೆಗೆದಿಟ್ಟರೆ 14 ಇನ್ನಿಂಗ್ಸ್’ಗಳಲ್ಲಿ 106 ರನ್. ಇದನ್ನು ನೋಡಿದ ಮೇಲೂ ರೋಹಿತ್ ಶರ್ಮಾ ಇನ್ನೂ ಟೆಸ್ಟ್ ಆಡಬೇಕು ಎಂದರೆ ಅದು ಅಂಧಾಭಿಮಾನದ ಮಾತಷ್ಟೇ.

ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಚೆನ್ನಾಗಿ ಆಡಿದರೆ ಜಗತ್ತೇ ಮೆಚ್ಚುತ್ತದೆ. ಕಾರಣ, ಅದು ಅಗ್ನಿಪಥ. ಆ ಅಗ್ನಿಪಥದಲ್ಲಿ ಈ ಬಾರಿ ಯಶಸ್ಸಿನ ಹೆಜ್ಜೆಗಳನ್ನಿಟ್ಟವವರು ನಮ್ಮ ಕನ್ನಡಿಗ ಕೆ.ಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ.

ಅದರಲ್ಲೂ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬೆಸ್ಟ್ ಓಪನರ್ ಎಂದು ಕರೆಸಿಕೊಂಡವನು ರಾಹುಲ್. ಪರ್ತ್ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ದ್ವಿಶತಕದ ಜೊತೆಯಾಟವಾಡಿದವನು ರಾಹುಲ್. ಭಾರತದ ಇಡೀ ಬ್ಯಾಟಿಂಗ್ ಲೈನಪ್’ನಲ್ಲಿ ಟೆಸ್ಟ್ ಕ್ರಿಕೆಟನ್ನು ಟೆಸ್ಟ್ ಕ್ರಿಕೆಟ್’ನಂತೆ ಆಡುತ್ತಿರುವವ ಯಾರಾದರೂ ಇದ್ದರೆ ಅದು ರಾಹುಲ್.

ಅಂತಹ ಇನ್’ಫಾರ್ಮ್ ರಾಹುಲ್’ನನ್ನು ಕೆಳಕ್ಕೆ ತಳ್ಳಿ ಔಟ್ ಆಫ್ ಫಾರ್ಮ್ ರೋಹಿತ್ ಶರ್ಮಾ ಆರಂಭಿಕನಾಗಿ ಬರುತ್ತಾನೆ ಎಂದರೆ ಇದರ ಹಿಂದೆ ವೈಯಕ್ತಿಕ ಹಿತಾಸಕ್ತಿ ಬಿಟ್ಟರೆ ಬೇರೇನೂ ಲಾಜಿಕ್ ಕಾಣುತ್ತಿಲ್ಲ.

ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ಘೋಷಣೆ ಮಾಡಿದಾಗ ಆ ದುಡ್ಡಿಗೆ ಪ್ರತಿಯೊಬ್ಬರೂ ಸಮಾನ ಹಕ್ಕುದಾರರು ಎಂದು ಹೇಳಿದ್ದವನು ರೋಹಿತ್ ಶರ್ಮಾ. ಆಗಿನ ಬಿಸಿಸಿಐ ಸೆಕ್ರೆಟರಿ ಜಯ್ ಷಾ ಮುಂದೆ ಕುಳಿತು ನಮ್ಮಂತೆ ಸಹಾಯಕ ಸಿಬ್ಬಂದಿಗೂ ಐದು ಕೋಟಿ ಕೊಡಲೇಬೇಕೆಂದು ಕಡ್ಡಿ ಮುರಿದಂತೆ ಹೇಳಿದ್ದವನು ರೋಹಿತ್ ಶರ್ಮಾ.

‘’ಇಲ್ಲ, ಅವರಿಗೆ 5 ಕೋಟಿ ಸಾಧ್ಯವೇ ಇಲ್ಲ, 50 ಲಕ್ಷ ಅಷ್ಟೇ ಕೊಡುತ್ತೇವೆ’’ ಎಂದಿದ್ದ ಜಯ್ ಷಾನ ಹಣೆಯಲ್ಲಿ ರೋಹಿತ್ ಆಡಿದ ಒಂದೇ ಮಾತಿಗೆ ಬೆವರು ಕಿತ್ತು ಬಂದಿತ್ತು. ‘’ನೀವು ಕೊಡದಿದ್ದರೆ ಬೇಡ.. ನಾನು, ವಿರಾಟ್ ಕೊಹ್ಲಿ ಸೇರಿ ಕೊಡುತ್ತೇವೆ’’ ಎಂದಿದ್ದನಂತೆ ರೋಹಿತ್. ಅವತ್ತು ನಿಜವಾದ ನಾಯಕನಾಗಿ, ನಿಸ್ವಾರ್ಥಿಯಾಗಿ ಕಂಡವನು ಇವತ್ತು ಸ್ವಾರ್ಥಕ್ಕೆ ಅನ್ವರ್ಥ ಎಂಬಂತೆ ಕಾಣುತ್ತಿದ್ದಾನೆ.

✍️ Sudarshan Gowda

#rohitsharma #rohitsharma45 #AUSvIND #cricket

#rohitsharma #rohitsharma45 #RohitSharma𓃵 #AUSvIND #BGT2024 #cricket
#KarunNair #RanjiTrophy #KarnatakaCricket #ಕನ್ನಡಿಗ #bcci #KSCA #vidarbha #vidarbhacricket

Leave a Reply

Your email address will not be published. Required fields are marked *

Wordpress Social Share Plugin powered by Ultimatelysocial
Open chat
ಸಹಾಯ ಬೇಕಾ
× How can I help you?