India vs Australia
ಬೆಳಗಿನ ಜಾವ ನಾಲ್ಕಕ್ಕೇ ಎದ್ದು ಕೂತಿದ್ದೆ.
ಭಾರತದ ಬ್ಯಾಟಿಂಗ್ ನೋಡೋಕಲ್ಲ.. ಬೌಲಿಂಗ್ ನೋಡಬೇಕು ಅಂತ.
ಬ್ಯಾಟಿಂಗ್ ನೋಡೋದಕ್ಕೆ ಇನ್ನೇನೂ ಉಳಿದಿರಲಿಲ್ಲ. ನಿತೀಶ್ ರೆಡ್ಡಿ ಶತಕ ನಿನ್ನೆಯೇ ಆಗಿತ್ತು. ಇವತ್ತು ನಿತೀಶ್ ಸಿರಾಜ್ ಜೋಡಿ ಬಹಳ ಹೊತ್ತು ಬಾಳುತ್ತೆ ಅನ್ನೋ ನಿರೀಕ್ಷೆಯೂ ಇರ್ಲಿಲ್ಲ. ಕೊನೆಯ ವಿಕೆಟ್ ಗೆ ನೂರೂ ಚಿಲ್ರೆ ರನ್ ಹೊಡೆದು ಮುನ್ನಡೆ ಪಡೆಯಲಿ ಅನ್ನೋ ದುರಾಸೆ ದೂರಾಸೆಯೂ ಇರಲಿಲ್ಲ.
ನಾನು ಎದ್ದು ಕೂತಿದ್ದಿದ್ದು ಬುಮ್ರಾ ಕೋನ್ ಸ್ಟಾಸ್ ನಡುವಿನ ಸಮರ ನೋಡೋಕಂತ.
ಈ ಹುಡುಗನ ಆಯ್ಕೆ ಆಗ್ತಾ ಇದ್ದ ಹಾಗೇ ಬಹಳಷ್ಟು ಮಾತು ಕೇಳಿ ಬಂದಿದ್ವು. ಇವ್ನು ಆಸ್ಟ್ರೇಲಿಯಾದ ಭವಿಷ್ಯದ ಸ್ಟಾರ್ ಅಂತ ಮಾತಿತ್ತು.
ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದಾನೆ ಅಂದ್ರೆ ಅವ್ನು ಸಾಮಾನ್ಯ ಆಟಗಾರ ಆಗಿರೋದಕ್ಕೆ ಸಾಧ್ಯವೇ ಇಲ್ಲ ಅಂತ ನನ್ನ ಭಾವನೆ.
ಮೊದಲ ಇನ್ನಿಂಗ್ಸ್ ಶುರು ಆದಾಗ ಬುಮ್ರಾ ಎದುರು ಹೊಸಬನ ಆಟ ನಡೆಯೋದಿಲ್ಲ ಬಿಡು ಎಂಬ ಅಹಂಭಾವವಿತ್ತು ನನ್ನಲ್ಲಿ.
ಆದರೆ ಈ ಹುಡುಗ ಆಟ ಕಲಿಯೋ ಮೊದಲು ಎದುರಾಳಿಯ ಆತ್ಮವಿಶ್ವಾಸ ಮುರಿಯೋದು ಹೇಗೆ ಅಂತ ಕಲಿತಿದ್ದ. ತನಗಿಂತ ಗಟ್ಟಿಗನನ್ನು ಸೈಕಲಾಜಿಕಲೀ ಹೇಗೆ ತಗ್ಗಿಸೋದು ಅನ್ನೋದನ್ನ ಕಲಿತಿದ್ದ ಅನ್ಸತ್ತೆ.
ಬುಮ್ರಾನನ್ನು ಒಬ್ಬ ಆರ್ಡಿನರಿ ಬೌಲರ್ ಎಂಬಂತೆ ಟ್ರೀಟ್ ಮಾಡತೊಡಗಿದ.
ನೀವು ಒಬ್ಬ ಶೋಯಬ್ ಅಖ್ತರ್ ಗೋ ಬ್ರೆಟ್ ಲೀಗೋ ಸ್ಕೂಪ್ ಟ್ರೈ ಮಾಡಬಹುದು.. ರಿವರ್ಸೂ ತಿರುಗಬಹುದು.. ಸ್ವಿಚ್ ಹಿಟ್ ಗೆ ಹೋಗೋ ಆರೋಗೆನ್ಸಿ ತೋರಬಹುದು.
ಆದರೆ ಪ್ರತಿ ಬಾಲೂ ಬುಡಕ್ಕೆ ಹೊಡೆಯೋ ಮಲಿಂಗನಿಗಾಗಲೀ… ಪ್ರತಿ ಎಸೆತವನ್ನೂ ಲಗೋರಿ ಚೆಂಡಿನಂತೆ ಎಸೆಯುವ ಬುಮ್ರಾಗಾಗಲೀ ಆ ರೀತಿಯ ಬೇಕಾಬಿಟ್ಟಿ ಶಾಟ್ಸ್ ಟ್ರೈ ಮಾಡೋದು ಸಾಧ್ಯವೇ ಇಲ್ಲ.
ಅದರಲ್ಲೂ ಬುಮ್ರಾ ಅಸ್ತ್ರ ಕೇವಲ ಯಾರ್ಕರ್ ಅಲ್ಲ. ಔಟ್ ಸ್ವಿಂಗ್, ಇನ್ ಸ್ವಿಂಗ್, ಲೆಗ್ ಕಟರ್, ಯಾರ್ಕರ್, ಸ್ಲೋ ಬಾಲ್, ಸ್ಲೋ ಬೌನ್ಸ್, ಸ್ಟ್ರೇಟ್ ಲೋ ಫುಲ್ ಟಾಸ್, ಯಾವುದು ಬರತ್ತೆ ಅಂತ ಯಾರಿಗೂ ಊಹಿಸೋಕೆ ಸಾಧ್ಯ ಇಲ್ಲ. ಖುದ್ದು ಕೀಪರ್ ಗೂ! ಅವನ ಬೌಲಿಂಗ್ ಶೈಲಿ ನೋಡಿ ಎಸೆತ ಊಹಿಸೋದು ಅಸಾಧ್ಯ. ಅವನ ಕೈ ತುದಿಯ ಮೇಲೆಯೇ ಕಾನ್ಸಂಟ್ರೇಟ್ ಮಾಡ್ತಾ ಇದ್ರೂ ಬಾಲ್ ಯಾವುದು ಬರಬಹುದು ಅಂತ ಗೆಸ್ ಮಾಡಲು ಸೋಲ್ತೀರಿ.
ಆದರೆ ಪದಾರ್ಪಣೆ ಮಾಡ್ತಾ ಇರೋ ಬಚ್ಚಾ ಬ್ಯಾಟರ್ ಕೋನ್ ಸ್ಟಾಸ್ ಅಂಥ ಬೌಲರನ್ನ ತೀರಾ ಕ್ಲಬ್ ಲೆವೆಲ್ ಬೌಲರನ್ನ ಟ್ರೀಟ್ ಮಾಡೋ ಥರ ಟ್ರೀಟ್ ಮಾಡೋಕೆ ಶುರು ಮಾಡ್ತಾನೆ.
ಬೇಕಂತ ರಿವರ್ಸ್ ತಿರುಗಿ ಹೊಡೆಯೋಕೆ ಹೋಗ್ತಾನೆ… ಸ್ಕೂಪ್ ಟ್ರೈ ಮಾಡ್ತಾನೆ.. ಇಲ್ಲಸಲ್ಲದ ಶಾಟ್ ಗಳನ್ನೆಲ್ಲ ಹೊಡೆಯೋಕೆ ಹೋಗ್ತಾನೆ..ಇದು ಬೌಲರನ್ನ ಕುಗ್ಗಿಸೋ ತಂತ್ರಾನಾ? ಕೆಣಕೋ ತಂತ್ರಾನಾ? ತನ್ನ ಆತ್ಮವಿಶ್ವಾಸವನ್ನ ಗಟ್ಟಿ ಮಾಡ್ಕೊಳೋ ಯತ್ನಾನಾ? ಬೌಲರ್ ನ ಲೈನ್ ಲೆಂತ್ ಗಳ ದಿಕ್ಕ್ತುತಪ್ಪಿಸೋ ಪ್ಲಾನಾ? ಫೀಲ್ಡರ್ ಗಳನ್ನು ಸ್ಲಿಪ್ ಏರಿಯಾಗಳಿಂದ ದೂರಕ್ಕಟ್ಟುವ ಆಲೋಚನೆಯಾ?
ಗೊತ್ತಿಲ್ಲ. ಕೋನ್ ಸ್ಟಾಸ್ ಟಿಟ್ವೆಂಟಿ ಐಪಿಎಲ್ ಪಂದ್ಯ ಆಡ್ತಿರುವವನ ಹಾಗೆ ಕ್ರೀಸಿನ ಸುತ್ತ ನರ್ತಿಸತೊಡಗ್ತಾನೆ.
ಹಾಗಂತ ಬುಮ್ರಾ ಸುಮ್ಮಸುಮ್ಮನೆ ಬುಮ್ರಾ ಆಗಿಲ್ಲವಲ್ಲ.
ಅವನಿಗೆ ಪಿಚ್ ಮ್ಯಾಟರ್ ಆಗಲ್ಲ.. ಬ್ಯಾಟರ್ ಮ್ಯಾಟರ್ ಆಗಲ್ಲ.. ಫೀಲ್ಡ್ ಪ್ಲೇಸ್ ಮೆಂಟ್ ಮ್ಯಾಟರ್ ಆಗಲ್ಲ.. ಬ್ಯಾಟರ್ ನ ಪೈರೋಟೆಕ್ನಿಕ್ ಗಳು ಮ್ಯಾಟರ್ ಆಗಲ್ಲ.
‘ವಿಕೆಟ್ ಬೇಕು’ ಅಂದ್ರೆ ‘ತಗೋ ಗುರೂ’ ಅನ್ನೋ ರೀತಿಯ ಬೌಲರ್.
ಬುಮ್ರಾ ಎಸೆತಗಳನ್ನು ಬೌಂಡರಿಗೆ ಅಟ್ಟೋಕೆ ಕೋನ್ ಸ್ಟಾಸ್ ಪದೇ ಪದೇ ಹೊಸ ಹೊಡೆತಕ್ಕೆ ಕೈ ಹಾಕ್ತಾನೆ. ಉಹೂಂ. ಸಿಗೋದಿಲ್ಲ. ಹಿಂದೆ ನಿಂತಿರೋ ಕೊಹ್ಲಿ ಶರ್ಮಾರ ಮುಖದಲ್ಲಿ ಪ್ರಶ್ನೆ… ಇವ್ನ್ ಯಾವನ್ ಗುರೂ ಬುಮ್ರಾ ಎದುರು ಈ ರೀತಿ ದಾರ್ಷ್ಟ್ಯ ತೋರಿಸ್ತಾ ಇದಾನೆ.. ಈ ಲೆವೆಲ್ ಉಡಾಫೆ..! ಬಾಲ್ ಸಿಗಲ್ಲ ಅಂದ್ರೂ ಬಿಡಲ್ವಲ್ಲ..! ಫಸ್ಟ್ ಟೆಸ್ಟು.. ನೆಟ್ಟಗೆ ಟೆಸ್ಟ್ ಥರ ಆಡೋಕೇನ್ ಧಾಡಿ ಅಂತ ಮಾತಾಡ್ಕೋತಿದಾರೆ.
ಈಗ ಬುಮ್ರಾ ಇವನನ್ನ ಮನೆಗೆ ಕಳಿಸ್ತಾನೆ ನೋಡು ಅಂತ ಕೊಹ್ಲಿ ಶರ್ಮಾ ಮನಸಲ್ಲಿ ಖಾತ್ರಿ. ನೋಡುಗರಿಗೂ ಅದೇ ಥಾಟ್.
ಆದರೆ ಕೋನ್ ಸ್ಟಾಸ್ ಬುಮ್ರಾ ಮೇಲೆ ಗೆದ್ದೇ ಬಿಟ್ಟ. ಫೋರ್ ಹೋಯ್ತು.. ಸಿಕ್ಸೂ ಹೋಯ್ತು. ಒಂದು ಸಾಲದು ಅಂತ ಇನ್ನೂ ಒಂದು!
ಆ ಹುಡುಗನ ಛಲ ಹಟ ನೋಡಿ ಖುಷಿಪಡಬೇಕೋ.. ಬುಮ್ರಾಗೇ ಹೊಡೆದುಬಿಟ್ಟನಲ್ಲ ಅಂತ ಉರ್ಕೋಬೇಕೋ ಗೊತ್ತಾಗದ ಸ್ಥಿತಿ ನಮ್ಮದು.
ನಮಗೇ ಹೀಗ್ ಆಗಿದ್ರೆ ಬುಮ್ರಾ ಮನಸು ಹೇಗೆ ಕುದ್ದಿರಬೇಡ? ಇಪ್ಪತ್ತೈದು ಟೆಸ್ಟ್ ಆಗಿತ್ತು.. ನಾಲ್ಕೂವರೆ ಸಾವಿರ ಬಾಲ್ ಗಳಲ್ಲಿ ಒಂದೇ ಒಂದು ಸಿಕ್ಸ್ ಕೂಡ ಹೊಡೆಸ್ಕೊಂಡಿರ್ಲಿಲ್ಲ ಬುಮ್ರಾ! ಸಿಂಗಲ್ ಸ್ಪೆಲ್ಲಲ್ಲಿ ಮೂವತ್ತು ರನ್ ಗಿಂತ ಜಾಸ್ತಿ ಕೊಟ್ಟಿರೋ ಇತಿಹಾಸ ಕೂಡ ಇರ್ಲಿಲ್ಲ.
ಅಂಥಾ ಬೌಲರ್ ಮೇಲೆ ಆಕ್ರಮಣ ಮಾಡಿಬಿಟ್ಟ ಈ ಹುಡುಗ.
ಟೆಸ್ಟ್ ಅನ್ನೋದು ಇದಕ್ಕೇನೇ ಅಲ್ವಾ?
ಇದು ಪ್ರತಿಭೆಯ ಟೆಸ್ಟ್, ತಾಳ್ಮೆಯ ಟೆಸ್ಟ್, ಸಾಮರ್ಥ್ಯದ ಟೆಸ್ಟ್, ಸೈಕಾಲಜಿಯ ಟೆಸ್ಟ್, ರೆಪ್ಯುಟೇಷನ್ ನ ಟೆಸ್ಟ್!
ಇವರಿಬ್ಬರ ಕಾಳಗ ಇನ್ನಷ್ಟು ಇಂಟರೆಸ್ಟಿಂಗ್ ಆಗಿಬಿಡ್ತು.
ಅಲ್ಲಿಂದ ಮುಂದೆ ಇದ್ದದ್ದು ಒಂದೇ ಗುರಿ.
ಇವನ ವಿಕೆಟ್ ಬುಮ್ರಾಗೇ ಬೀಳ್ಬೇಕು. ಬುಮ್ರಾ ಇವನು ಸೆಂಚುರಿ ಹೊಡೆಯೋ ಮೊದ್ಲು ಬೌಲ್ಡ್ ಮಾಡ್ಬೇಕು.. ವಿಕೆಟ್ ಎಗರ್ಕೊಂಡ್ ಹೋಗ್ ಬೇಕು ಅಂತ..!
ಅದಕ್ಕೋಸ್ಕರ ಮ್ಯಾಚ್ ನೋಡ್ತಾ ಕೂತರೆ… ಉಹೂಂ.. ಬುಮ್ರಾಗೆ ವಿಕೆಟ್ ಕೊಡ್ಲೇ ಇಲ್ಲ ಈ ಹುಡುಗ.
ಆತ ಬಿದ್ದಿದ್ದು ಸ್ಪಿನ್ನರ್ ರವೀಂದ್ರ ಜಡೇಜಾಗೆ.
ಇವತ್ತು ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಕೂತಿದ್ದು ಇದೇ ಕಾರಣಕ್ಕೆ.
ಭಾರತದ ಬೌಲಿಂಗ್ ಇನ್ನಿಂಗ್ಸ್ ನೋಡೋದಕ್ಕೆ.
ಕೋನ್ ಸ್ಟಾಸ್ ಮೊದಲ ಇನ್ನಿಂಗ್ಸಲ್ಲಿ ಬುಮ್ರಾ ಎದುರು ತೋರಿಸಿದ ದಾರ್ಷ್ಟ್ಯ ಈ ಇನ್ನಿಂಗ್ಸ್ ತೋರಿಸಿ ಬಿಡಲಿ ಅನ್ನೋ ಚಾಲೆಂಜಲ್ಲೇ ಕೂತೆ.
ಈ ಇನ್ನಿಂಗ್ಸಲ್ಲಿ ಬುಮ್ರಾ ಕೋನ್ ಸ್ಟಾಸ್ ನ ವಿಕೆಟ್ ಉದುರಿಸೋದಕ್ಕೆ ಖಂಡಿತ ಹೊಸ ಅಸ್ತ್ರದೊಂದಿಗೆ ಬಂದಿರ್ತಾನೆ ಅಂತ ನಂಗೆ ನಂಬಿಕೆ. ಅವ್ನು ಇಲ್ಲೀತನಕ ಯಾವ ಬ್ಯಾಟರ್ ಗೂ ತನ್ನ ವಿರುದ್ಧ ಸತತ ಮೇಲುಗೈ ಸಾಧಿಸೋಕೆ ಬಿಟ್ಟಿರೋ ಇತಿಹಾಸವೇ ಇಲ್ಲ.
ಇನ್ನಿಂಗ್ಸ್ ಶುರು ಆಗ್ತಾ ಇದ್ದ ಹಾಗೇ ಬುಮ್ರಾ ಆ ನಂಬಿಕೆ ಗಟ್ಟಿಗೊಳಿಸಿಬಿಟ್ಟ. ಅವನೊಳಗೆ ಮೊದಲ ಇನ್ನಿಂಗ್ಸಲ್ಲಿ ಎರಡು ಸಿಕ್ಸರ್ ಹೊಡೆಯೋಕೆ ಬಿಟ್ಟಿದ್ದು, ತನ್ನ ಬೌಲಿಂಗನ್ನ ಮಕ್ಕಳ ಬೌಲಿಂಗಿನಂತೆ ಟ್ರೀಟ್ ಮಾಡಿದ್ದು ಎಲ್ಲವೂ ವಿಪರೀತ ಕಾಡಿತ್ತು ಅನ್ಸತ್ತೆ. ಎರಡು ದಿನ ಪೂರ್ತಿ ಕೋನ್ ಸ್ಟಾಸ್ ನನ್ನು ಪುಡಿಗಟ್ಟೋದು ಹೇಗೆ ಅಂತ ಸ್ಟಡಿ ಮಾಡಿದಂತಿತ್ತು ಅವನ ಬೌಲಿಂಗ್ ವೈಖರಿ. ಕೋನ್ ಸ್ಟಾಸ್ ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾನಿಂದ ಇಂಥ ಎಸೆತಗಳನ್ನು ಕಂಡಿರಲಿಲ್ಲ.
ಸಚಿನ್ ಪದೇ ಪದೇ ಕೆಲವು ಬೌಲರ್ ಗಳ ಎದುರು ಫೇಲ್ ಆದಾಗ, ಅಥವಾ ಒಂದೇ ರೀತಿಯಲ್ಲಿ ಔಟಾಗ್ತಾ ಇದೀನಿ ಅಂತ ತನ್ನ ಗಮನಿಸಿಕೊಂಡಾಗ, ಆ ವೈಫಲ್ಯ ದೌರ್ಬಲ್ಯ ಮೀರೋದಕ್ಕೆ ಹಗಲು ರಾತ್ರಿ ಶ್ರಮಿಸ್ತಾ ಇದ್ದನಂತೆ. ಬುಮ್ರಾನೂ ಹಾಗೆ ಮಾಡಿದ್ದಿರಬಹುದಾ? ಕೋನ್ ಸ್ಟಾಸ್ ಬ್ಯಾಟಿಂಗ್ ನ ವಿಡಿಯೋಗಳನ್ನ ನೋಡಿರಬಹುದಾ? ಕೋನ್ ಸ್ಟಾಸ್ ತನಗೆ ಯಾವ ಎಸೆತಕ್ಕೆ ಸಿಕ್ಸ್ ಹೊಡೆದ. ಯಾವ ಎಸೆತ ಅವನಿಗೆ ಆ ಧೈರ್ಯ ತಂದುಕೊಡ್ತು.. ಯಾವ ಎಸೆತಗಳು ಅವ್ನಿಗೆ ಈಸಿ ಆಗ್ತಿವೆ. ಯಾವುದಕ್ಕೆ ತಿಣುಕ್ತಿದಾನೆ.. ಇದೆಲ್ಲವನ್ನೂ ವಿಡಿಯೋ ನೋಡಿ ಸ್ಟಡಿ ಮಾಡಿರಬಹುದಾ?
ಗೊತ್ತಿಲ್ಲ..
ಇನ್ನಿಂಗ್ಸ್ ನ ಏಳನೇ ಓವರ್. ತನ್ನ ನಾಲ್ಕನೇ ಓವರ್.. ಮೂರನೇ ಎಸೆತ…!
ಸುಮಾರು ನೂರಾನಲವತ್ತು ಕಿಲೋಮೀಟರಲ್ಲಿ ಬಂದ ಚೆಂಡು ಕೋನ್ ಸ್ಟಾಸ್ ನ ಮೆದುಳು ರೆಸ್ಪಾಂಡ್ ಮಾಡೋಕೂ ಅವಕಾಶ ಕೊಡಲಿಲ್ಲ. ಬ್ಯಾಟ್ ಮತ್ತು ಪ್ಯಾಡ್ ನಡುವೆ ಇರೋ ಸಣ್ಣ ಗ್ಯಾಪನ್ನ ತೂರಿ ಹೋಗಿ ವಿಕೆಟ್ ಎಗರಿಸಿಬಿಡ್ತು..!
ಒಂದು ಅದ್ಭುತ ಎಸೆತ.. ಕ್ಷಣಾರ್ಧದ ಅರ್ಧದಲ್ಲಿ ಕೋನ್ ಸ್ಟಾಸ್ ನನ್ನು ಮುಗಿಸಿಹಾಕಿತ್ತು..!
ಎವೆರಿ ಡೇ ಈಸ್ ನಾಟ್ ಬಾಕ್ಸಿಂಗ್ ಡೇ!!
ನಾಲ್ಕು ಗಂಟೆಗೆ ಎದ್ದು ಕೂತಿದ್ದು ಸಾರ್ಥಕವಾಗಿ ಹೋಯ್ತು. ಬುಮ್ರಾ ದೊಡ್ಡ ಸೆಲೆಬ್ರೇಷನ್.. ಸ್ಲೆಡ್ಜ್ ಏನೂ ಮಾಡಲಿಲ್ಲ. ಕ್ರೌಡ್ ಗೆ ಸೂಚ್ಯವಾಗಿ ಹೇಳ್ದ.. ಟೈಮ್ ಟು ಚಿಯರ್ ಅಂತ..!
ನಿತೀಶ್ ಕುಮಾರ್ ರೆಡ್ಡಿಯ ಸೆಂಚುರಿ ಕೊಟ್ಟ ಖುಷಿ.. ಬುಮ್ರಾ ತೆಗೆದ ಈ ವಿಕೆಟ್ ಈ ಪಂದ್ಯದಲ್ಲಿ ನನ್ನ ಪಾಲಿನ ಪೈಸಾವಸೂಲ್ ಐಟಮ್ಸ್.
ಹಾಂ ಇನ್ನೊಂದ್ ಇದೆ.. ಪಂತ್ ಔಟ್ ಆದಾಗ ಗಾವಸ್ಕರ್ ಕಮೆಂಟರಿ ಬಾಕ್ಸಿನಲ್ಲಿ ಕೂತು ಬಯ್ದನಲ್ಲ.. ಅದು…
ಅದರ ಬಗ್ಗೆ ಸಪರೇಟಾಗಿ ಮಾತಾಡೋಣ ಆಮೇಲೆ.
ಮತ್ತೆ ಹೇಳ್ತಿದೀನಿ.. ಬಾರ್ಡರ್ ಗಾವಸ್ಕರ್ ಸರಣಿಯಲ್ಲಿ ಇಡೀ ಟೀಮ್ ಇಂಡಿಯಾವನ್ನು ದೂಷಿಸಿ..ಬುಮ್ರಾ ನಿತೀಶ್ ರೆಡ್ಡಿ ಇವರಿಬ್ಬರನ್ನು ಬಿಟ್ಟು.
ಈ ಹುಡುಗ ನಿತೀಶ್ ರೆಡ್ಡಿ ಪ್ರತಿ ಇನ್ನಿಂಗ್ಸಲ್ಲೂ ತನ್ನ ಗಟ್ಟಿತನ ತೋರ್ತಾನೇ ಇದಾನೆ. ಟಾಪ್ ಆರ್ಡರಲ್ಲಿ ಬರುವಂಥ ಆಟ ಇದೆ. ಟೇಲೆಂಡರ್ ಗಳ ಜೊತೆ ಸೇರಿ ಆಡಿ ತಂಡವನ್ನು ಉಳಿಸೋ ಅನಿವಾರ್ಯತೆ. ಪ್ರತಿಪಂದ್ಯದಲ್ಲೂ ಸವಾಲಿನ ಸಂದರ್ಭ. ಈ ಹುಡುಗ ಇದೇ ಆಟ ಉಳಿಸಿಕೊಂಡ್ರೆ ಭವಿಷ್ಯ ಇದೆ. ❤
ಈ ಸರಣಿ ಸೋಲದೇ ಹೋದ್ರೆ ಬುಮ್ರಾ ಪ್ಲೇಯರ್ ಆಫ್ ದ ಸೀರೀಸ್ ಆಗೋದು ಖಚಿತ.
ಆದರೆ ನನ್ನ ಕಡೆಯಿಂದ ವಿಶೇಷ ಪ್ರಶಸ್ತಿ ನಿತೀಶ್ ರೆಡ್ಡಿಗೆ. ಇವನೇ ನನ್ನ ಆಯ್ಕೆಯ ಸರಣಿಶ್ರೇಷ್ಠ.