Guru Prasad director
*ಹತಾಶ ಪ್ರೇಕ್ಷಕನಿಂದ ಹತಾಶ ಪ್ರೇಕ್ಷಕನವರೆಗೂ*
ಬರಹ : ಚೇತನ್ ನಾಡಿಗೇರ್
ಗುರುಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಹತಾಶ ಪ್ರೇಕ್ಷಕನಾಗಿ ಬಂದವರು. ಅವರು ಬಂದ ಕಾಲಕ್ಕೆ ಪರಿಸ್ಥಿತಿಯೂ ಹಾಗೆ ಇತ್ತೆನ್ನಿ. ಬರೀ ರೌಡಿಸಂ, ಪೊಲೀಸ್ ಮತ್ತು ಪ್ರೇಮಕಥೆಗಳೇ ಹೆಚ್ಚಾಗಿ ಬರುತ್ತಿದ್ದವು. ಒಂದೇ ತರಹದ ಕಥೆಗಳನ್ನು ಕೇಳಿ, ನೋಡಿ ಪ್ರೇಕ್ಷಕರು ಹತಾಶರಾಗಿದ್ದರು. ಇವೆಲ್ಲವನ್ನೂ ಬಿಟ್ಟು ಬೇರೇನೋ ಮಾಡಬೇಕು ಎಂದು ಯಾವಾಗಲೂ ಹಪಹಪಿಸುತ್ತಿದ್ದರು ಗುರುಪ್ರಸಾದ್. ಕನ್ನಡಕ್ಕೆ ಆಸ್ಕರ್ ಪ್ರಶಸ್ತಿಯನ್ನು ತಂದುಕೊಡಬೇಕು ಎಂದು ಕನಸು ಕಾಣುತ್ತಿದ್ದರು. ಪ್ರೇಕ್ಷಕರನ್ನು ಹತಾಶೆಯಿಂದ ಹೊರತರುವ ಪ್ರಯತ್ನ ಮಾಡುವುದಾಗಿ ಹೆಜ್ಜೆ ಇಟ್ಟರು.
ಅದಕ್ಕೆ ಪ್ರತಿಯಾಗಿ ರೂಪುಗೊಂಡಿದ್ದೇ ‘ಮಠ’. ಮೊದಲ ಪ್ರಯತ್ನದಲ್ಲೇ ಒಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ್ದರು ಗುರುಪ್ರಸಾದ್. ಸುದರ್ಶನ್ ಅವರು ಮಾಡಿದ ಪಾತ್ರವನ್ನು ಮೊದಲು ಜಿ.ವಿ. ಅಯ್ಯರ್ ಮಾಡಬೇಕಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಮಾಡಿದ ಪಾತ್ರವನ್ನು ಅನಂತ್ ನಾಗ್ ಮಾಡಬೇಕಿತ್ತು. ಚಿತ್ರದಲ್ಲಿ ನಟಿಸುವುದಕ್ಕೆ ಜಿ.ವಿ. ಅಯ್ಯರ್ ಸಹ ಒಪ್ಪಿಕೊಂಡಿದ್ದರು. ಆದರೆ, ವಯೋಸಹಜ ಖಾಯಿಲೆಗಳಿಂದ ಅವರು ನಿಧನರಾದರು. ಕಾರಣಾಂತರಗಳಿಂದ ಅನಂತ್ ನಾಗ್ ಸಹ ಹಿಂದೆ ಸರಿದರು. ಆಗ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದೇ ಸುದರ್ಶನ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್. ಜೊತೆಗೆ ಜಗ್ಗೇಶ್ ಮತ್ತು ಗ್ಯಾಂಗ್. ಅಲ್ಲಿಯವರೆಗೂ ‘ಭಂಡ’ ಪಾತ್ರಗಳನ್ನೇ ಜಗ್ಗೇಶ್ ಮಾಡುತ್ತಿದ್ದರು. ಆ ಚಿತ್ರದಲ್ಲಿ ಅದು ಮುಂದುವರೆದರೂ, ಚಿತ್ರದ ಒಟ್ಟಾರೆ ಹಿನ್ನೆಲೆಯೇ ಬೇರೆ ಇತ್ತು. ಕಥೆ ಜೊತೆಗೆ ಉಪಕಥೆ ಸೇರೆ ಚಿತ್ರ ಬೇರೆಯದೇ ರೂಪ ಪಡೆಯಿತು.
ಗುರುಪ್ರಸಾದ್ ಅವರ ಮೊದಲ ಪ್ರಯತ್ನವೇ ಜನರ ಗಮನಸೆಳೆಯಿತು. ಸಮಾಜದ ಒಂದು ವ್ಯವಸ್ಥೆಯನ್ನು ತಮ್ಮದೇ ರೀತಿಯಲ್ಲಿ ವಿಡಂಬನೆ ಮಾಡಿದ್ದರು ಗುರು. ಕಮರ್ಷಿಯಲ್ ಚೌಕಟ್ಟಿನಲ್ಲಿ ಚಿಂತನೆಗೆ ಹಚ್ಚುವ ಇಂಥ ಪ್ರಯತ್ನ ನೋಡಿ ಪ್ರೇಕ್ಷಕರು ಖುಷಿಯಾದರು. ಒಂದು ಗಂಭಿರವಾದ ವಿಷಯವನ್ನು ಹೀಗೆ ಹಾಸ್ಯಮಯ ರೀತಿಯಲ್ಲಿ ಹೇಳಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದಿಷ್ಟು ದ್ವಂದ್ವರ್ಥಾದ ಸಂಭಾಷಣೆಗಳಿದ್ದರೂ ಹೊಟ್ಟೆಗೆ ಹಾಕಿಕೊಂಡು, ಒಂದು ಹೊಸ ಪ್ರಯತ್ನ ಮತ್ತು ಪ್ರಯೋಗವೆಂದು ಬೆನ್ನು ತಟ್ಟಿದರು. ಚಿತ್ರಮಂದಿರಗಳಲ್ಲಿ ಆ ಚಿತ್ರ ನೂರಾರು ದಿನಗಳ ಪ್ರದರ್ಶನ ಕಾಣಲಿಲ್ಲ ನಿಜ. ಆದರೆ, ಯೂಟ್ಯೂಬ್ನಲ್ಲಿ ಆ ಚಿತ್ರದ ದೃಶ್ಯಗಳನ್ನು ಪದೇಪದೇ ನೋಡಿ ಎಂಜಾಯ್ ಮಾಡಿದವರ ಸಂಖ್ಯೆಯೇನೂ ಕಡಿಮೆಯಲ್ಲ.
ಆ ನಂತರ ಗುರುಪ್ರಸಾದ್, ‘ಎದ್ದೇಳು ಮಂಜುನಾಥ’ ಚಿತ್ರ ಮಾಡಿದರು. ಮೊದಲ ಚಿತ್ರಕ್ಕಿಂತ ಈ ಚಿತ್ರ ವಿಭಿನ್ನವಾಗಿತ್ತು. ಪ್ರತಿ ಮನೆಯಲ್ಲೂ ಇರಬಹುದಾದ ಒಬ್ಬ ಮಂಜುನಾಥನ ಕಥೆ ಹೇಳಿದರು ಗುರುಪ್ರಸಾದ್. ಕೆಲವೇ ಪಾತ್ರಗಳು, ಸೀಮಿತ ಪರಿಸರದಲ್ಲಿ, ಎಲ್ಲರಿಗೂ ಮುಟ್ಟುವಂತಹ ಒಂದು ಕಥೆ ಹೇಳಿದರು. ಮೊದಲು ನಗಿಸುತ್ತಲೇ, ಚಿಂತನೆಗೆ ಹಚ್ಚಿ, ಕೊನೆಗೆ ಅಳುವಂತೆ ಮಾಡಿದರು. ಈ ಚಿತ್ರ ಸಹ ಗೆದ್ದಿತು. ಈ ಎರಡೂ ಚಿತ್ರಗಳಿಂದ ಜಗ್ಗೇಶ್ ಅವರನ್ನು ಪ್ರೇಕ್ಷಕರು ನೋಡುವ ದೃಷ್ಠಿಕೋನವೇ ಬದಲಾಯಿತು. ಅಲ್ಲಿಯವರೆಗೂ ಜಗ್ಗೇಶ್ ಅವರ ಪ್ರತಿಭೆಯನ್ನು ಸಾಣೆ ಹಿಡಿಯುವ ಪಾತ್ರಗಳು ಅವರಿಗೆ ಅಷ್ಟಾಗಿ ಸಿಕ್ಕಿರಲಿಲ್ಲ. ಅದು ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಚಿತ್ರಗಳಲ್ಲಿ ಅವರಿಗೆ ಸಿಕ್ಕಿದ್ದವು. ಜಗ್ಗೇಶ್ ಸಹ ತಮಗೆ ಸಿಕ್ಕ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡು, ಬರೀ ತಮ್ಮ ಪಾತ್ರಕ್ಕಷ್ಟೇ ಅಲ್ಲ, ಎರಡೂ ಚಿತ್ರಗಳಿಗೆ ಜೀವ ತುಂಬಿದರು.
ಈ ಎರಡೂ ಚಿತ್ರಗಳ ನಂತರ ಗುರುಪ್ರಸಾದ್ ಮೇಲೆ ನಿರೀಕ್ಷೆ ಹೆಚ್ಚಾಯಿತು. ನಿಜಕ್ಕೂ ಅವರು ಕನ್ನಡ ಚಿತ್ರರಂಗವನ್ನು ಬದಲಿಸಬಹುದು ಎಂಬ ಆಸೆ ಹತಾಶೆ ಪ್ರೇಕ್ಷಕರದ್ದಾಯಿತು. ಆದರೆ, ಅಷ್ಟರಲ್ಲಿ ಗುರು ಅವರಲ್ಲಿ ಒಂದು ಬದಲಾವಣೆ ಆಗಿತ್ತು. ಅದೇನು ಭ್ರಮೆಯೋ, ಮದವೋ, ಅಹಂಕಾರವೋ … ಗೊತ್ತಿಲ್ಲ. ಒಟ್ಟಿನಲ್ಲಿ ತಮ್ಮ ಮೂರನೇ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಗುರುಪ್ರಸಾದ್ ತಮ್ಮದೇ ದೊಡ್ಡ ಕಟೌಟ್ ನಿಲ್ಲಿಸಿಕೊಂಡಿದ್ದರು. ಒಬ್ಬ ನಿರ್ದೇಶಕ, ಬರಹಗಾರ ಮನಸ್ಸು ಮಾಡಿದರೆ ಚಿತ್ರದ ದಿಕ್ಕನ್ನೇ ಬದಲಿಸಬಹುದು ಎಂದು ಹೇಳುತ್ತಿದ್ದರು. ಆದರೆ, ಚಿತ್ರ ಬಿಡುಗಡೆಯಾದ ನಂತರ, ಅವರ ಮೇಲಿದ್ದ ಪ್ರೇಕ್ಷಕರ ನಿರೀಕ್ಷೆ ಸ್ವಲ್ಪ ಕಡಿಮೆಯಾಯಿತು. ಏಕೆಂದರೆ, ಮೊದಲೆರಡು ಚಿತ್ರಗಳಲ್ಲಿ ಗುರುಪ್ರಸಾದ್ ಅವರ ಬರವಣಿಗೆ ಮತ್ತು ಕೆಲಸ ಕಂಡರೆ, ಮೂರನೇ ಚಿತ್ರದಲ್ಲಿ ಗುರುಪ್ರಸಾದ್ ಅವರೇ ಕಂಡರು. ಅದು ನಾಲ್ಕು ಮತ್ತು ಐದನೇ ಚಿತ್ರಗಳಲ್ಲೂ ಮುಂದುವರೆಯಿತು.
ಹಾಗೆ ನೋಡಿದರೆ, ಗುರುಪ್ರಸಾದ್ ಯಾವುದರ ವಿರುದ್ಧ ಸಿಡಿದೆದ್ದಿದ್ದರೋ, ಅದನ್ನೇ ತಾವೂ ಮಾಡಿದರು. ಅವರಿಗೆ ಸ್ವಾತಂತ್ರ್ಯ, ಅವಕಾಶ, ಸಾಮರ್ಥ್ಯ ಎಲ್ಲವೂ ಇತ್ತು. ಆದರೆ, ಅವರೇ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ? ಒಂದೇ ತರಹದ ಚಿತ್ರಗಳನ್ನು ನೋಡಿ ಹತಾಶೆಗೊಳಗಾಗಿದ್ದ ಅವರು, ತಾವೂ ಅದನ್ನೇ ಮಾಡಿ ಪ್ರೇಕ್ಷಕರನ್ನು ಹತಾಶೆಗೆ ತಳ್ಳಿದರು. ಅಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಫಾರ್ಮುಲಾ ಚಿತ್ರಗಳನ್ನು ಗುರುಪ್ರಸಾದ್ ಮಾಡಲಿಲ್ಲ ನಿಜ. ಆದರೆ, ತಾವೇ ಒಂದು ಫಾರ್ಮುಲಾ ಹುಟ್ಟುಹಾಕಿದರು. ಅವರ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರೇ ಸೃಷ್ಟಿಸಿದ ಒಂದು ಫಾರ್ಮುಲಾದ ಚೌಕಟ್ಟಿನಲ್ಲಿದೆ. ಅದೊಂದು ಚಿತ್ರ ಎನ್ನುವುದಕ್ಕಿಂತ ರೇಡಿಯೋ ನಾಟಕ ಎಂದೇ ಕರೆದವರಿದ್ದರು. ಅದಕ್ಕೆ ಸರಿಯಾಗಿ ಒಂದು ಚಿತ್ರಕ್ಕಿದ್ದ ದೃಶ್ಯ ಸಾಧ್ಯತೆಗಳನ್ನು ಗುರುಪ್ರಸಾದ್ ಬಳಸಿಕೊಳ್ಳುತ್ತಿರಲಿಲ್ಲ. ಅವರು ಮಾತಿಗೆ, ನಗುವಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಸಾಧ್ಯವಾದಷ್ಟೂ ನಗು ಉಕ್ಕಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಕೆಲವೊಮ್ಮೆ ಪ್ರೇಕ್ಷಕರನ್ನು ನಗಿಸುವುದಕ್ಕೆ ದ್ವಂದ್ವಾರ್ಥದ ಮೊರೆ ಹೋಗುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಅವರ ಎಲ್ಲಾ ಚಿತ್ರಗಳಲ್ಲೂ ನೋಡಬಹುದು.
ಅದು ‘ರಂಗನಾಯಕ’ ಚಿತ್ರದಲ್ಲಿ ಅತಿರೇಕಕ್ಕೆ ಹೋಯಿತು. ಚಿತ್ರದ ಆಶಯ, ಕಥೆ ಚೆನ್ನಾಗಿತ್ತಾದರೂ ಒಟ್ಟಾರೆ ಚಿತ್ರಕ್ಕೊಂದು ಚೌಕಟ್ಟೇ ಇರಲಿಲ್ಲ. ಗುರುಪ್ರಸಾದ್ರಂತ ಅನುಭವಿ ನಿರ್ದೇಶಕರ, ಸಿನಿಮಾ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದವರ ಮತ್ತು ಸಿನಿಮಾ ಬಗ್ಗೆ ಪಾಠ ಮಾಡುವವರ ಚಿತ್ರ ಹೀಗೆ ಸೂತ್ರವಿಲ್ಲದ ಗಾಳಿಪಟದಂತೆ ಹಾರುವುದನ್ನು ನೋಡಿ ಪ್ರೇಕ್ಷಕರು ಶಾಕ್ ಆಗಿದ್ದರು. ಗುರುಪ್ರಸಾದ್ ಉಡಾಫೆಯಿಂದ ಚಿತ್ರ ಮಾಡಿದ್ದಾರೆ, ಬೇಜವಾಬ್ದಾರಿಯಿಂದ ಚಿತ್ರ ಮಾಡಿದ್ದಾರೆ ಎಂಬ ಮಾತುಗಳೇ ಹೆಚ್ಚು ಕೇಳಿಬಂದಿತ್ತು. ಯಾವ ಗುರು ಪ್ರೇಕ್ಷಕರನ್ನು ಹತಾಶೆಯಿಂದ ಹೊರತರುವುದಕ್ಕೆ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದರೋ, ಅವರೇ ಇನ್ನಷ್ಟು ಹೊಸ ಹತಾಶ ಪ್ರೇಕ್ಷಕರನ್ನು ಹುಟ್ಟುಹಾಕಿದ್ದರು. ಏನೋ ಆಗಿದ್ದು ಆಗಿ ಹೋಯಿತು, ಗುರು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳಬಹುದು, ಮುಂದಿನ ದಿನಗಳಲ್ಲಿ ಒಂದಿಷ್ಟು ಒಳ್ಳೆಯ ಚಿತ್ರಗಳನ್ನು ನೀಡುವ ಮೂಲಕ ಪ್ರೇಕ್ಷಕರು ತಮ್ಮ ಮೇಲಿಟ್ಟಿದ್ದ ಭರವಸೆಯನ್ನು ಉಳಿಸಿಕೊಳ್ಳಬಹುದು ಎಂದು ಹಲವರು ನಂಬಿದ್ದರು. ಆದರೆ, ಗುರು ಆ ನಂಬಿಕೆ ಸುಳ್ಳು ಮಾಡಿದ್ದಾರೆ.
‘ತಪ್ಪು ಮಾಡದವ್ರು ಯಾರವ್ರೇ? ತಪ್ಪು ಮಾಡದವ್ರು ಎಲ್ಲವ್ರೇ?’ ಎಂದು ಪ್ರಶ್ನಿಸಿದ್ದ ಮತ್ತು ತಪ್ಪು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದ ಗುರು, ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲೂ ಹಲವು ತಪ್ಪುಗಳನ್ನು ಮಾಡಿಕೊಂಡರು. ಅದರಿಂದ ಆಚೆ ಬರುವ ಶಕ್ತಿ ಅವರಿಗೆ ಖಂಡಿತಾ ಇತ್ತು. ಆದರೆ, ಬರುವ ಯೋಚನೆ ಅದ್ಯಾಕೋ ಮಾಡಲೇ ಇಲ್ಲ. ‘ತಿದ್ದಿಕೊಳ್ಳೋದಕ್ಕೆ ಐತೇ ದಾರಿ ಮುಂದೆ’ ಅಂತ ಗೊತ್ತಿದ್ದರೂ, ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುವುದಕ್ಕೆ ಮುಂಚೆಯೇ ತಮಗೆ ತಾವೇ ಕೆಟ್ಟ ಶಿಕ್ಷೆಯನ್ನು ಕೊಟ್ಟುಕೊಂಡಿದ್ದಾರೆ. ತಮ್ಮ ಚಿತ್ರದ ಪಾತ್ರಗಳಿಗೆ ಚಿತ್ರದ ಕೊನೆಯಲ್ಲಿ ತಪ್ಪು ತಿದ್ದುಕೊಳ್ಳುವ ಅವಕಾಶ ನೀಡುತ್ತಿದ್ದ ಅವರು, ತಮಗೆ ಮಾತ್ರ ಅಂಥದ್ದೊಂದು ಅವಕಾಶ ಕೊಡಲೇ ಇಲ್ಲ ಎಂಬುದು ದುರಂತ.
ಗುರು ಪ್ರಸಾದ್ ಅವರ ನೆನಪು ಕಾಡುತ್ತಿತ್ತು ಅವ್ರು ಪ್ರತಿಭಾವಂತ ನಿರ್ದೇಶಕ
ಕರ್ನಾಟಕ ಕಂಡ ಅತ್ಯಂತ ಅಪರೂಪದ ನಿರ್ದೇಶಕ ಗುರು ಪ್ರಸಾದ್
#Guruprasad #mata #Jaggesh
Related Stories
December 19, 2024
December 19, 2024
December 19, 2024