bigg boss kannada season 11
2018ರ ಎಂಡ್ ಅನ್ಸತ್ತೆ.. ಪಾರೂ ಧಾರಾವಾಹಿ ಲಾಂಚ್ ಆಯ್ತು..
ಪ್ರೊಮೋಗಳಲ್ಲಿ ಪಾರೂ ಪಾತ್ರಧಾರಿಯನ್ನು ನೋಡಿದ ಕೂಡ್ಲೆ ಎಲ್ಲೋ ನೋಡಿದೀನಲ್ಲ ಅಂತ ಏನೋ ಮಸುಕುಮಸುಕಾಗಿ ಒಂದು ಫ್ಲಾಶ್ ಬ್ಯಾಕ್ ಸ್ಟೋರಿ ಮರೆವುನೆನಪುಗಳ ಮಧ್ಯ ಓಡಾಡತೊಡಗಿತು.
ಮುಖ ನೋಡಿದೀನಿ..ಎಲ್ಲಿ ಏನು ಎತ್ತ ಅಂತ ನೆನಪಾಗ್ತಿಲ್ಲ. ಇವಳ ಹೆಸರು ಮೋಕ್ಷಿತಾ ಪೈ ಅಲ್ಲ.. ಬೇರೇನೋ ಇದೆ ಅಂತಾನೂ ಅನಿಸ್ತಿದೆ. ಆದರೆ ಏನಂತ ನೆನಪಿಗೆ ಬರ್ತಿಲ್ಲ.
ಒಂದೆರಡು ವಾರ ಕಳೆದಿತ್ತು. ಗೆಳೆಯ ರಘುರಾಮಪ್ಪ ಹೀಗೇ ಬೇರೇನೋ ವಿಷಯಕ್ಕೆ ಫೋನ್ ಮಾಡಿದ. ಏನೇನೋ ಲೋಕಾಭಿರಾಮ ವಿಷಯಗಳನ್ನು ಮಾತಾಡ್ತಾ ಇದ್ದಾಗ.. ಪಾರೂ ಧಾರಾವಾಹಿ ಹೀರೋಯಿನ್ ವಿಷಯ ಬಂತು…
ಮಗಾ ಎಲ್ಲೋ ನೋಡಿದೀನಿ.. ನೆನಪಾಗ್ತಾ ಇಲ್ಲ.. ಅವಳ ಹೆಸ್ರೂ ಅಷ್ಟೆ ಮೋಕ್ಷಿತಾ ಅಲ್ಲ.. ಬೇರೇನೋ ಇದೆ ಅಂತ ನನ್ನ ಗೊಂದಲ ಶೇರ್ ಮಾಡ್ಕೊಂಡೆ.
ರಘುರಾಮಪ್ಪ.. ರಪ್ ಅಂತ ಡೀಟೇಲ್ಸ್ ಕೊಟ್ಟುಬಿಟ್ಟ.
ನವಿನೂ… ಇಂಥ ಡೇಟಲ್ಲಿ ಇಂಥ ಒಂದ್ ಕ್ರೈಮ್ ಆಗಿತ್ತು. ಹಿಂಗಿಂಗೆ ಕಥೆ. ಅವ್ಳ ಹೆಸರು ಐಶ್ವರ್ಯ ಪೈ ಅಂತ.. ಈಗ ಮೋಕ್ಷಿತಾ ಪೈ ಆಗಿ ಬಂದಿದಾಳೆ.. ಅಂತ ಪಟಪಟನೆ ಹೇಳ್ತಾ ಹೋದ.
ನನ್ನೊಳಗಿನ ಪತ್ರಕರ್ತ ಜಾಗೃತನಾಗಿಬಿಟ್ಟ. ಹಳೆಯ ಪತ್ರಿಕಾ ವರದಿಗಳನ್ನ ನ್ಯೂಸ್ ಬೈಟ್ ಗಳನ್ನ ಎಲ್ಲವನ್ನೂ ಹುಡುಕಿ ತೆಗೆದಿಟ್ಟುಕೊಂಡೆ.
ರಘು ಕೂಡ ಕೆಲವು ಲಿಂಕ್ ಕಳಿಸಿಕೊಟ್ಟ.
ಪಾರೂ ಕರಾಳ ಇತಿಹಾಸ.. ಪಾರೂ ಎಂಬ ಮಕ್ಕಳ ಕಳ್ಳಿ.. ಮೋಕ್ಷಿತಾ ಪೈ ಮೊದಲ ಹೆಸರೇನು ಗೊತ್ತಾ? ಪಾರೂ ಎಂಬ ಮಾಜಿ ಕಿಡ್ನಾಪರ್.. ಇಂಥ ಹಲವಾರು ಸ್ಟೋರಿಗಳು ಚಕಚಕನೆ ಫಾರ್ಮ್ ಆಗಿಬಿಟ್ವು. ಅಕ್ಷರಕ್ಕೆ ಇಳಿಸಿ ಪೋಸ್ಟ್ ಮಾಡೋದಷ್ಟೇ ಬಾಕಿ.
ಮರುದಿನ ಆ ಪೋಸ್ಟ್ ನ್ಯೂಸ್ ಚಾನೆಲ್ಲಿಗೆ, ವೆಬ್ ಪೇಜ್ ಗಳಿಗೆ, ಟ್ರೋಲರ್ ಗಳಿಗೆ ಆಹಾರ! ನಂಗೆ ದೊಡ್ಡ ವೈರಲ್ ನ್ಯೂಸ್ ಸೃಷ್ಟಿಸಿದ ಸಾಧನೆಯ ಖುಷಿ…! ಏನ್ ಗುರೂ ಎಲ್ಲೆಲ್ಲಿಂದ ಹುಡುಕಿ ತಂದಿದೀಯ, ನೀನು ಸೂಪರ್ ಬಿಡು, ಈ ರೀತಿ ಹೊಗಳಿಕೆಗಳ ನಿರೀಕ್ಷೆ.. ಇದರ ಬೆನ್ನಲ್ಲೇ ಪಾರೂ ಧಾರಾವಾಹಿಯ ಜೀ ಚಾನಲ್ಲವ್ರ ವಿರೋಧ ಕಟ್ಕೋಬೇಕಾಗತ್ತಾ ಅನ್ನೋ ಯೋಚನೆ.. ಅವ್ರಿಗೆ ಸಂಕಷ್ಟ ಆಗಬಹುದಾ? ಸೀರಿಯಲ್ ಗೆ ಡ್ಯಾಮೇಜ್ ಆಗಬಹುದಾ? ಅಥವಾ ಅವ್ರು ಇದನ್ನ ಪ್ರಚಾರಕ್ಕಾಗಿ ಬಳಸಿಕೊಂಡು ಪ್ಲಸ್ಸೇ ಆಗಬಹುದಾ? ಮೋಕ್ಷಿತಾಳನ್ನ ಕಿತ್ತಾಕಿ ಬೇರೆ ಹೀರೋಯಿನ್ ಆಯ್ಕೆ ಮಾಡಬಹುದಾ? ಆ ಹುಡುಗಿ ನನ್ನ ಮೇಲೆ ಮೀಡಿಯಾ ಮೂಲಕ ಮುಗಿಬೀಳಬಹುದಾ? ಅದ್ಕೆಲ್ಲ ಕೇರ್ ಮಾಡಲ್ಲ ಬಿಡು… ಆದ್ರೂ ಏನ್ ಪರಿಣಾಮ ಆಗಬಹುದು? ಹೀಗೆಲ್ಲ ಏನೇನೋ ಯೋಚನೆಗಳು ಹರಿದಾಡತೊಡಗಿದ್ವು.
ನಂಗೆ ಪ್ರತಿ ದಿನ ಈ ಪಾರೂ ಧಾರಾವಾಹಿಯ ಪ್ರೋಮೋ ನೋಡಿದ್ರೂ, ಏನೇ ಸೀರಿಯಲ್ ವಿಷಯ ಮಾತಿಗೆ ಬಂದ್ರೂ ಈ ಸೆನ್ಸೇಷನಲ್ ಸ್ಟೋರಿಯದ್ದೇ ಗುಂಗು. ಮಾಡಿಬಿಡ್ಲಾ ಮಾಡಿಬಿಡ್ಲಾ ಅಂತ!
ಅಷ್ಟರಲ್ಲಿ ಜೀ ಕುಟುಂಬ ಅವಾರ್ಡ್ಸ್ ಈವೆಂಟ್ ಬಂತು.
ಬಿಜಿಎಸ್ ಮೈದಾನದಲ್ಲಿ ಕೂತು ಲೈವ್ ಕಾರ್ಯಕ್ರಮ ನೋಡ್ತಾ ಕೂತಿದೀನಿ…
ಎಲ್ಲ ಸೀರಿಯಲ್ ಗಳ ನಟನಟಿಯರು ತಂತ್ರಜ್ಞರು ವೇದಿಕೆ ಮೇಲೆ ಬಂದು ಹೋಗ್ತಿದಾರೆ..
ಒಬ್ಬೊಬ್ಬರದು ಒಂದೊಂದು ಕಥೆಗಳು.. ಎಮೋಷನಲ್ ಮೊಮೆಂಟ್ ಗಳು..
ಟಿವಿಲಿ ಬರೋ ಹೊತ್ತಿಗೆ ಅದು ಎಡಿಟ್ ಆಗಿ ಮ್ಯೂಸಿಕ್ ಸಮೇತವಾಗಿ ಬರುತ್ತೆ. ಇನ್ನಷ್ಟು ಎಮೋಷನಲ್ ಆಗಿ ಪ್ರೆಸೆಂಟ್ ಆಗತ್ತೆ.
ಆದರೆ ಎಡಿಟ್ ಮ್ಯೂಸಿಕ್ ಇಲ್ಲದೆಯೂ ಅವು ಅಸಲಿ ಎಮೋಷನಲ್ ಮೊಮೆಂಟ್ ಗಳೇ ಆಗಿದ್ವು..
ಇಂಥ ಟೈಮಲ್ಲಿ ಆಗಷ್ಟೇ ಲಾಂಚ್ ಆಗಿದ್ದ ಧಾರಾವಾಹಿ ಪಾರೂ ನಾಯಕಿ ವೇದಿಕೆ ಮೇಲೆ ಬಂದ್ಲು.
ನಂಗೆ ಆಕೆಯನ್ನು ಕಂಡ ಕೂಡ್ಲೆ ಮತ್ತೆ ಕ್ರೈಮ್ ಸ್ಟೋರಿಯೇ ಕಣ್ಮುಂದೆ ಬಂತು.
ಈ ಹುಡುಗಿಗ್ಯಾವ ಎಮೋಷನಲ್ ಮೊಮೆಂಟ್ ಇರೋಕೆ ಸಾಧ್ಯ. ಕಿಡ್ನಾಪರ್.. ಮಕ್ಕಳ ಕಳ್ಳಿ..! ಹೀಗೆ ಅಂದ್ಕೊಂಡೆ.
ಅವಳೇ ವಾಲೆಂಟರಿಯಾಗಿ ಇವತ್ತು.. ಆ ಸತ್ಯವನ್ನ.. ಆ ನೀಚ ಇತಿಹಾಸವನ್ನ ಹೇಳ್ಕೊಂಡ್ ಬಿಡಬಹುದಾ?
ನಾನು ಹೀಗ್ ಇದ್ದೆ. ಹೀಗ್ ಮಾಡಿದ್ದೆ.. ಆದರೆ ಇವತ್ತು ಅದನ್ನೆಲ್ಲ ನೆನಪ್ ಮಾಡ್ಕೊಂಡ್ರೆ ಅಸಹ್ಯ ಆಗತ್ತೆ.. ದುಃಖ ಆಗತ್ತೆ.. ನಂಗೆ ಜೀ ಕನ್ನಡ ಪಾರೂ ಮೂಲಕ ಹೊಸ ಬದುಕು ಕೊಟ್ಟಿದೆ ಅಂತ ಹೇಳ್ಕೊಂಡ್ ಬಿಡಬಹುದಾ?
ಹಾಗೆ ಹೇಳಿ ಆಕೆ ಅತ್ತುಬಿಡಬಹುದಾ? ಆ ಎಮೋಷನಲ್ ಮೊಮೆಂಟ್ ಕ್ಯಾಪ್ಚರ್ ಮಾಡ್ಕೊಂಡು ಜೀ ಕನ್ನಡ ಒಂದಷ್ಟು ಟಿಆರ್ಪಿ ಮಾಡ್ಕೊಬಹುದಾ? ಆನಂತರ ಅದನ್ನೇ ಇರೋ ಬರೋ ಚಾನೆಲ್ ಗಳು, ಪೇಜ್ ಗಳು, ಯೂಟ್ಯೂಬ್ ಗಳು ಸುದ್ದಿ ಮಾಡಬಹುದಾ?
ಅವಳೇ ಒಂದು ಕನ್ಫೆಷನ್ ಮೂಲಕ ಕ್ಲೀನ್ ಚಿಟ್ ಕೊಡುಸ್ಕೊಂಡ್ ಬಿಡ್ತಾಳಾ ಈಗ ಜನರಿಂದ…? ಏನೇನೋ ಯೋಚನೆಗಳು.
ಛೇ.. ನಾನು ಮಾಡಬೇಕಿದ್ದ ಸ್ಟೋರಿ ಹೀಗೆ ವೇಸ್ಟ್ ಆಗಿ ಹೋಯ್ತಲ್ಲ.. ಕೈತಪ್ಪಿ ಹೋಯ್ತಲ್ಲ ಅನ್ನೋ ಕೊಳಕುಬೇಸರ ನನ್ನೊಳಾಗಿತ್ತಾ? ಗೊತ್ತಿಲ್ಲ..
ಆದರೆ ಪಾರೂ ವೇದಿಕೆಗೆ ಬಂದು ಖುಷಿಖುಶಿಯಾಗಿ ಧಾರಾವಾಹಿಯ ಬಗ್ಗೆ, ತನ್ನ ಪಾತ್ರದ ಬಗ್ಗೆ… ಇತ್ಯಾದಿ ಇತ್ಯಾದಿ ಮಾತಾಡ್ತಾ ಹೋದ್ಲು. ಈ ವಿಚಾರ ಬರ್ಲೇ ಇಲ್ಲ ಅಲ್ಲಿ.
ಅಷ್ಟರಲ್ಲಿ.. ಪಾರೂಳ ನಿಜಜೀವನದ ಕುಟುಂಬಸ್ಥರ ಎಂಟ್ರಿ ಆಯ್ತು ವೇದಿಕೆಗೆ.. ಅಪ್ಪ ಅಮ್ಮನ ಜೊತೆ ವೀಲ್ ಚೇರಲ್ಲೊಂದು ವಿಶೇಷ ಚೇತನ ಮಗು..! ಮಗು ಅಂದ್ರೆ ಚಿಕ್ಕದೇನಲ್ಲ.. ಆವತ್ತಿಗೆ ಏಳೆಂಟು ವರ್ಷನೋ ಇನ್ನೂ ಜಾಸ್ತೀನೋ ಇತ್ತು..
ಪಾರೂ ತಮ್ಮ ಅದು..
ಮೋಕ್ಷಿತಾ ಪೈಗೆ ಒತ್ತರಿಸಿಕೊಳ್ಳಲಾಗದಂತೆ ಅಳು. ಅಪ್ಪ ಅಮ್ಮ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅಳ್ತಿದಾಳೆ.. ಅವರನ್ನೆಲ್ಲ ತಬ್ಬಿ ಮುತ್ತಿಡ್ತಿದಾಳೆ. ತಮ್ಮನ ಬಗ್ಗೆ.. ತಮ್ಮನಿಗೆ ತನ್ನ ಮೇಲಿರೋ ಪ್ರೀತಿ ಬಗ್ಗೆ.. ತನಗೆ ತಮ್ಮನ ಮೇಲಿರೋ ಅಟ್ಯಾಚ್ ಮೆಂಟ್ ಬಗ್ಗೆ ಕಷ್ಟದ ಧ್ವನೀಲಿ ಮಾತಾಡ್ತಾ ಇದಾಳೆ.
ನೋಡ್ತಾ ನೋಡ್ತಾ ನನ್ನ ಕಣ್ಣಲ್ಲೂ ನೀರು.
.. ಈ ಹುಡುಗಿಗೆ ಇಂಥ ಒಬ್ಬ ತಮ್ಮನಿದಾನಾ? ಇಂಥ ಒಬ್ಬ ವಿಶೇಷ ಚೇತನ ಮಗು ಮನೇಲಿರುವಾಗ ಇನ್ನೊಂದು ಮಗುವನ್ನು ಕಿಡ್ನಾಪ್ ಮಾಡಿ ಹಣ ಕೇಳುವ ಮನಸ್ಸು ಬಂದಿದ್ದಾದ್ರೂ ಹೇಗೆ? ಪಾಪಪ್ರಜ್ಞೆ ಕಾಡಲಿಲ್ವಾ? ಇನ್ಯಾರದ್ದೋ ಮಗುವನ್ನು ಕಿಡ್ನಾಪ್ ಮಾಡಿಸುವಾಗ, ಮನೇಲಿದ್ದ ತನ್ನ ಈ ತಮ್ಮ ನೆನಪಾಗಲಿಲ್ವಾ?
ಈ ಯೋಚನೆಗಳು ಬರ್ತಾ ಇರುವಾಗ್ಲೇ..
ಮೋಕ್ಷಿತಾ ಮನೆಯಲ್ಲಿ ಇಂಥ ಒಬ್ಬ ವಿಶೇಷ ಚೇತನ ಇರೋದು ಇವತ್ತು ಗೊತ್ತಾಗಿದೆ ನಮಗೆಲ್ಲ. ಹೇಳಿಕೊಳ್ಳಲಾಗದ, ತೋರಿಸಿಕೊಳ್ಳಲಾಗದ ಇನ್ನೆಷ್ಟು ಕಷ್ಟಗಳು ಅವಳಿಗಿತ್ತೋ.. ಟ್ಯೂಷನ್ ಮಾಡ್ತಾ ಇದ್ಲು ಅಂದ್ರೆ… ಬದುಕು ಏನೇನು ಸವಾಲೊಡ್ಡಿತ್ತೋ…
ಅದೆಂಥ ಪರಿಸ್ಥಿತಿಯಲ್ಲಿ ಈ ಕಿಡ್ನಾಪ್ ಮಾಡೋ ಕೆಟ್ಟ ಮನಸು ಕೆಟ್ಟ ಧೈರ್ಯ ಬಂತೋ…
ಯಾರ ಪ್ಲಾನಿಗೆ ಈಕೆ ಪಾತ್ರಧಾರಿ ಆದ್ಲೋ ಅಂತ ಕೂಡ ಮನಸಲ್ಲಿ ಯೋಚನೆಗಳು ಹರಿದಾಡತೊಡಗಿದ್ವು.
ಈ ಕಿಡ್ನಾಪ್ ಡ್ರಾಮಾ ನಡೆದಾಗ ಆಕೆಯಿನ್ನೂ ಬುದ್ಧಿಬಲಿಯದ ವಯಸ್ಸಿನ ಟೀನೇಜರ್. ಆಕೆಗೊಬ್ಬ ಬಾಯ್ ಫ್ರೆಂಡ್.. ನೆಮ್ಮದಿಯಾಗಿ ಟ್ಯೂಷನ್ ಮಾಡ್ಕೊಂಡಿದ್ದ ಹುಡುಗಿಯ ಮನಸಲ್ಲಿ ಇಂಥದ್ದೊಂದು ಪ್ಲಾನ್ ಬಿತ್ತಿದ್ದು ಆವನು. ಅವನು ಪ್ಲಾನ್ ಮಾಡ್ತಾನೆ. ಈಕೆ ಸಹಕರಿಸ್ತಾಳೆ. ಕೆಟ್ಟ ಘಟನೆಯೊಂದು ನಡೆದುಹೋಗತ್ತೆ.
ತಲೆಯಲ್ಲಿ ಯೋಚನೆಗಳ ಮೆರವಣಿಗೆ.
ಪ್ರತಿ ಮಹಾತ್ಮನಿಗೂ ಒಂದು ಪಾತಕ ಇತಿಹಾಸ ಇರಬಹುದು. ಪ್ರತಿ ಪಾತಕಿಗೂ ಭವಿಷ್ಯದಲ್ಲಿ ಒಂದು ಹೊಸ ಬದುಕಿರಬಹುದು..
ವಾಲ್ಮೀಕಿಯಿಂದ ಹಿಡಿದು ಎಂಥೆಂಥವರೆಲ್ಲ ಕಣ್ಣೆದುರು ಬಂದು ಬಂದು ಹೋದರು.
ಪ್ರತಿ ಕಥೆಯನ್ನೂ ಎಷ್ಟೊಂದು ಆಯಾಮಗಳಲ್ಲಿ ಹೇಳಬಹುದಲ್ವಾ?
ವಾಲ್ಮೀಕಿಯೆಂಬ ಕಟುಕ ಬೇಟೆಗಾರ… ರಾಮಾಯಣ ರಚಿಸುವ ಸಾತ್ವಿಕ ಮಹರ್ಷಿಯಾಗಿ ಬದಲಾದ ಕಥೆಯನ್ನೂ ಹೇಳಬಹುದು.
ರಾಮಾಯಣ ರಚಿಸಿದ ವಾಲ್ಮೀಕಿ ಮೊದ್ಲು ಎಂಥಾ ಕಟುಕ ಆಗಿದ್ದ ಗೊತ್ತಾ? ಅಂತ ಅವನ ಇತಿಹಾಸವನ್ನೇ ವೈಭವೀಕರಿಸಿ, ಅವನ ಕೆಟ್ಟ ಪಾಸ್ಟನ್ನೇ ದೊಡ್ಡದು ಮಾಡಿಯೂ ಹೇಳಬಹುದು.
ಹುಡುಗಾಟದ ದಿನದಲ್ಲಿ ಅರಿಯದೇ ತಪ್ಪು ಮಾಡಿ ಬದುಕು ಕಳೆದುಕೊಳ್ತಾ ಇದ್ದ ಹುಡುಗಿ, ಪಾರೂ ಪಾತ್ರದ ಮೂಲಕ ಜನಮನ ಗೆದ್ದ ಕಥೆ ಅಂತ ಪಾಸಿಟಿವ್ ಸ್ಟೋರಿಯನ್ನೂ ಮಾಡಬಹುದಲ್ವಾ ಅಂತನಿಸ್ತು.
ಇದು ಓದುಗರಿಗೆ ಸ್ಫೂರ್ತಿದಾಯಕವೆನಿಸುವ ಜೀವನಗಾಥೆಯೂ ಆಗಬಹುದು. ಆಕೆಯ ತೇಜೋವಧೆ ಮಾಡುವ ಕ್ರೈಮ್ ಸ್ಟೋರಿಯೂ ಆಗಬಹುದು.
ಎಲ್ಲವೂ ಕಥೆ ಹೇಳುವವನ ಕೈಲಿದೆ ಅಲ್ವಾ ಅನಿಸಿತು.
ಯಾಕೆ ಇದನ್ನು ಪಾಸಿಟಿವ್ ಆಗಿ ಹೇಳಬಾರದು? ಅಂತ ಮನಸಲ್ಲಿ ಆ ರೀತಿಯಲ್ಲೇ ಸ್ಟೋರಿ ರೂಪಿಸಿಕೊಂಡೆ.
ಬರೆಯೋದಷ್ಟೇ ಬಾಕಿ.
ಆದರೆ ಮತ್ತೆ ಕೈ ತಡೆಹಿಡಿದುಕೊಳ್ತು.
ನಾನು ಯಾವ ಆಂಗಲ್ ಕೊಟ್ಟು ಬರೆದರೂ… ಟ್ರೋಲರ್ಸ್ ಅಥವಾ ನ್ಯೂಸ್ ಮೀಡಿಯಾಗೆ ಇದನ್ನು ಬೇರೆ ಆಂಗಲ್ಲಲ್ಲಿ ಮಾಡೋದಕ್ಕೆ ಆಹಾರ ಒದಗಿಸಿದ ಹಾಗೇನೇ ಆಗತ್ತೆ.
ನಾನು ಹೀಗೆ ಬರೆದರೂ ಹಾಗೆ ಬರೆದರೂ ಆ ಹುಡುಗಿಗೆ ತನ್ನದೇ ರೀತೀಲಿ ಡ್ಯಾಮೇಜ್ ಮಾಡೇ ಮಾಡುತ್ತೆ.
ಎಲ್ಲ ಮರೆತಿರುವಾಗ…… ಮತ್ತೆ ಇದನ್ನು ಕೆದಕಿ ಬರೆಯೋ ಅಗತ್ಯ ಇದ್ಯಾ?
ಒಂದು ವೇಳೆ… ಈ ಹುಡುಗಿ ಇವತ್ತಿಗೂ ಬದಲಾಗದೇ ದುರಹಂಕಾರಿಯಾಗಿ ಮೆರೆಯುವವಳಾಗಿದ್ದರೆ ಇತಿಹಾಸ ನೆನಪಿಸಿ ಬರೆಯೋದ್ರಲ್ಲಿ ಅರ್ಥ ಇರ್ತಿತ್ತು.
ಆಕೆ ಹೊಸ ಮನುಷ್ಯಳಾಗಿ ಬದುಕಲು ಆಸೆ ಪಡ್ತಿದಾಳೆ. ಅಂದಿನ ಆ ಹೆಸರು ಕೂಡ ಬೇಡ ಅಂತ ಅಕ್ಷರಶಃ ಪುನರ್ಜನ್ಮ ಪಡೆದವಳ ಹಾಗೆ.. ಐಶ್ವರ್ಯದ ಆಸೆ ಬಿಟ್ಟು ಮೋಕ್ಷ ಹೊಂದಿರುವವಳಂತೆ ಮೋಕ್ಷಿತಾ ಆಗಿದ್ದಾಳೆ.
ಆಕೆಗೆ ಬದುಕು ಕೊಟ್ಟಿರೋ ಮತ್ತೊಂದು ಅವಕಾಶವನ್ನು ಕಿತ್ತುಕೊಳ್ಳೋದು ಕ್ರೌರ್ಯ ಅಲ್ಲವಾ? ವಿಕೃತಿ ಅಲ್ಲವಾ?
ಬೇಡ ಬಿಟ್ಟುಬಿಡು ಅಂದುಬಿಡ್ತು ಮನಸು. ಆಕೆ ಮನುಷ್ಯಳಾಗಿದಾಳೆ. ನಾನು ಇದನ್ನು ಬರೆದರೆ ಮನುಷ್ಯ ಅನಿಸಿಕೊಳ್ಳುವುದಿಲ್ಲ ಅನಿಸಿತು.
ಸುಮ್ಮನಾಗಿಬಿಟ್ಟೆ.
ಆಕೆ ಬಿಗ್ ಬಾಸ್ ಹೋಗಿರೋ ಈ ಹೊತ್ತಲ್ಲಿ ಆಕೆಯ ಹಳೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂತು. ಎಲ್ಲವೂ ನೆನಪಾಯಿತು.
ಆದರೆ ನಿನ್ನೆ ಆಕೆಯ ತಮ್ಮನನ್ನು ಬಿಗ್ ಬಾಸ್ ಪ್ರೊಮೋದಲ್ಲಿ ವೀಲ್ ಚೇರ್ ಮೇಲೆ ನೋಡಿದಾಗ ಮನಸು ಭಾವುಕವಾಯ್ತು.. ಹಳೆಯದೆಲ್ಲವನ್ನೂ ಒಮ್ಮೆ ಹೇಳಿಬಿಡಬೇಕೆನಿಸಿ ಇಷ್ಟು ಬರೆದೆ.